
ಸಾಲ ನೀಡದ ಕೋಪ: ಕಿಡಿಗೇಡಿಯಿಂದ ಬ್ಯಾಂಕ್‌ಗೆ ಪೆಟ್ರೋಲ್ ಎರಚಿ ಬೆಂಕಿ!
Monday, January 10, 2022
ಹಾವೇರಿ: ಸಾಲ ನೀಡದ ಕೋಪದಲ್ಲಿ ಕಿಡಿಗೇಡಿಯೋರ್ವನು ಪೆಟ್ರೋಲ್ ಎರಚಿ ಬ್ಯಾಂಕ್ ಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ನಿವಾಸಿ ವಸೀಮ್(33) ಕೃತ್ಯ ಎಸಗಿರುವ ಆರೋಪಿ.
ವಸೀಮ್ ಬೆಳಗ್ಗಿನ ಜಾವ ಹೆಡಿಗ್ಗೊಂಡ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ ಪರಾರಿಯಾಗಲು ಯತ್ನಿಸುತ್ತಿದ್ದಂತೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯಲ್ಲಿ ಬ್ಯಾಂಕ್‌ನಲ್ಲಿದ್ದ ಕಾಗದ ಪತ್ರಗಳು, ಕಂಪ್ಯೂಟರ್ ಭಸ್ಮವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಢಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.