
ಅಕ್ರಮ ಸಂಬಂಧದ ಶಂಕೆ: ಪ್ರೇಯಸಿಯನ್ನು ಸುತ್ತಿಗೆಯಲ್ಲಿ ಬಡಿದು ಕೊಂದ ಪ್ರಿಯಕರ
Friday, January 14, 2022
ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಮದ್ಯದ ಅಮಲಿನಲ್ಲಿದ್ದ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪ್ರಿಯಕರನೋರ್ವನು ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಸುಳ್ಳು ವಿಳಾಸ ನೀಡಿ ಪರಾರಿಯಾಗಿದ್ದವನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದವನಾದ ಮಂಜುನಾಥ್ (40) ಬಂಧಿತ ಆರೋಪಿ.
ಮಂಜುನಾಥ್ ಜ.6ರಂದು ತನ್ನ ಪ್ರಿಯತಮೆ ಮಂಜುಳಾಳನ್ನು ಕೊಲೆಗೈದಿದ್ದ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಮಾರಕಾಸ್ತ್ರ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
ಕಳೆದ 7 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಮಂಜುನಾಥ್ ಅವಿವಾಹಿತನಾಗಿದ್ದು, ಬಾರ್ ಬೆಡ್ಡಿಂಗ್ ವೃತ್ತಿ ನಿರ್ವಹಿಸುತ್ತಿದ್ದ. ಈತ ಕೋಣನಕುಂಟೆಯ ಬೀರೇಶ್ವರನಗರದಲ್ಲಿ ವಾಸವಾಗಿದ್ದ ಈತ ಹಲವು ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ. ಈ ನಡುವೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಕೆಯಿಂದ ಮಂಜುಳಾ ಎಂಬಾಕೆಯ ಪರಿಚಯವಾಗಿದೆ.
ವಿವಾಹಿತೆಯಾಗಿದ್ದ ಮಂಜುಳಾ, ಪತಿಯಿಂದ ದೂರವಾಗಿದ್ದಳು. ಈಕೆಯ ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದರು. ಈಕೆಯ ದುರ್ನಡತೆಯಿಂದ ಸಂಬಂಧಿಕರು ಮನೆಯಿಂದ ಹೊರಗಟ್ಟಿದ್ದರು. ಹೀಗಾಗಿ ಮಡಿವಾಳದಲ್ಲಿ ಬಾಡಿಗೆ ಮನೆಯಲ್ಲಿದ್ದು, ಹೌಸ್‌ಕಿಪಿಂಗ್ ಕೆಲಸಕ್ಕೆ ಹೋಗುತ್ತಿದ್ದಳು. ಆ ಬಳಿಕ ಮಂಜುನಾಥನೊಂದಿಗೆ ಸಂಬಂಧ ಬೆಳೆಸಿಕೊಂಡು, ಕೋಣನಕುಂಟೆಯಲ್ಲಿರುವ ಆತನ ಮನೆಯಲ್ಲಿಯೇ ವಾಸವಾಗಿದ್ದಳು.
ಸುಮಾರು 16 ವರ್ಷಗಳಿಂದ ಮದ್ಯದ ಚಟ ಅಂಟಿಸಿಕೊಂಡಿದ್ದ ಮಂಜುಳಾ ಪ್ರತಿ ನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು. ಪ್ರಿಯಕರ ಮಂಜುನಾಥನೇ ಆಕೆಗೆ ಮದ್ಯ ತಂದು ಕೊಡುತ್ತಿದ್ದ. ಈ ನಡುವೆ ಆಕೆ ಪರ ಪುರುಷರೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಗುರುವಾರ ರಾತ್ರಿ ಮಂಜುಳಾ, ಮದ್ಯ ತರುವಂತೆ ಹೇಳಿದ್ದಾಳೆ. ಮಂಜುನಾಥ್ ಒಂದು ಬಾಟಲಿ ತಂದು ಕೊಟ್ಟಿದ್ದಾನೆ. ಅನಂತರ ಮತ್ತೊಂದು ಬಾಟಲಿ ಬೇಕೆಂದು ಹಠ ಹಿಡಿದಿದ್ದಾಳೆ. ತರಲು ಹಣವಿಲ್ಲ ಎಂದು ಆತ ಹೇಳಿದ್ದಾನೆ.
ಆಗ ಮಂಜುಳಾ, ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ, ಮದ್ಯದ ಅಮಲಿನಲ್ಲಿದ್ದ ಆಕೆ ಮೇಲೆ ಹಲ್ಲೆ ನಡೆಸಿ, ತಲೆಯನ್ನು ಗೋಡೆಗೆ ಗುದ್ದಿ, ಬಳಿಕ ಬಾರ್ ಬೆಡ್ಡಿಂಗ್ ಕೆಲಸಕ್ಕೆ ಬಳಸುವ ಸುತ್ತಿಗೆಯಿಂದ ಆಕೆಯ ತೊಡೆ, ಬೆನ್ನಿಗೆ ಹೊಡೆದು ಮೂಳೆ ಮುರಿದಿದ್ದಾನೆ, ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.
ಆಕೆ ಮೃತಪಟ್ಟಿರುವುದನ್ನು ಖಾತರಿಮಾಡಿಕೊಂಡ ಮಂಜುನಾಥ್ ಮೃತದೇಹಕ್ಕೆ ಸ್ನಾನ ಮಾಡಿಸಿ, ಬಟ್ಟೆ ಬದಲಿಸಿದ್ದಾನೆ. ರಾತ್ರಿಯಿಡೀ ಮೃತದೇಹದ ಜತೆಯೇ ಇದ್ದು, ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದ್ದಾಳೆಂದು ಮನೆ ಮಾಲೀಕರ ಸಹಾಯ ಪಡೆದು ಜಯನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದಾನೆ. ಚಿಕಿತ್ಸೆ ನೀಡಿದ ವೈದ್ಯರು ಮೃತಪಟ್ಟಿದ್ದಾಳೆಂದು ದೃಢಪಡಿಸಿದ್ದರು. ಆಗ ಆರೋಪಿ ಚುಂಚಘಟ್ಟ ಎಂದು ಸುಳ್ಳು ವಿಳಾಸ ನೀಡಿ ಪರಾರಿಯಾಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಳಾಸ ಪತ್ತೆ ಹಚ್ಚಿದಾಗ ಸುಳ್ಳು ಎಂಬುದು ಗೊತ್ತಾಗಿದೆ. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಬುಧವಾರ ರಾತ್ರಿ ಬೈನಪಾಳ್ಯ ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲು ಮುಂದಾಗಿದ್ದಾಗ ಆತನನ್ನು ಬಂಧಿಸಲಾಗಿದೆ. ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.