
ಸಾಲ ತೀರಿಸುವವರೆಗೆ ಪತಿಯ ಮನೆಗೆ ಬರುದಿಲ್ಲವೆಂದು ತವರು ಮನೆಯಲ್ಲೇ ಉಳಿದ ಪತ್ನಿ: ಕಂಗಾಲಾದ ಪತಿ ಠಾಣೆಗೆ ದೂರು!!!
Friday, January 21, 2022
ಚಾಮರಾಜನಗರ: ಲಕ್ಷಾಂತರ ರೂ. ಸಾಲ ಸೋಲ ಮಾಡಿ ರಾಜಾರೋಷವಾಗಿ ತಿರುಗಾಡುತ್ತಿರುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ, ಇಲ್ಲೊಬ್ಬ ಮಹಿಳೆ ಪತಿ ಮಾಡಿರುವ ಸಣ್ಣ ಸಾಲದಿಂದ ಬೇಸತ್ತು ಮನೆಯನ್ನೇ ತೊರೆದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಶಿವಕುಮಾರ್ ಎಂಬವರು ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಪ್ರೇಮಾ ಎಂಬಾಕೆಯನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಎರಡು ತಿಂಗಳ ಹಿಂದೆ ಹಬ್ಬಕ್ಕೆಂದು ಪ್ರೇಮಾ ತವರಿಗೆ ಬಂದಿದ್ದರು. ಇದೀಗ ಪತಿ ಶಿವಕುಮಾರ್ ಮಾಡಿರುವ ಏಳು ಸಾವಿರ ರೂ. ಸಾಲವನ್ನು ತೀರಿಸುವವರೆಗೆ ತಾನು ಮನೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಪರಿಣಾಮ ಕಂಗಾಲಾದ ಪತಿ ಶಿವಕುಮಾರ್ ಆದಷ್ಟು ಬೇಗ ಸಾಲ ತೀರಿಸುತ್ತೇನೆ. ನಿನ್ನ ಬಳಿ ಹಣ ಕೇಳುವುದಿಲ್ಲ ಎಂದರೂ ಪ್ರೇಮಾ ಒಪ್ಪದೇ ತವರಲ್ಲಿ ಕುಳಿತಿದ್ದಾಳೆ.
ಇದೀಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪತಿ 'ತನ್ನ ಪತ್ನಿಗೆ ಬುದ್ಧಿ ಹೇಳಿ ತನ್ನೊಟ್ಟಿಗೆ ಇರುವಂತೆ ಮಾಡಬೇಕೆಂದು' ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.