
ರೈಲಿನಲ್ಲಿ ಶೌಚಕ್ಕೆಂದು ಹೋಗಿ ನಾಪತ್ತೆಯಾದ ತಾಯಿ - ಮಗು ಹಳಿಯ ಮೇಲೆ ಹೆಣವಾಗಿ ಪತ್ತೆ
Wednesday, January 5, 2022
ನಾಗ್ಪುರ (ಮಹಾರಾಷ್ಟ್ರ): ರೈಲಿನ ಶೌಚಾಲಯಕ್ಕೆಂದು ಹೋಗಿರುವ ತಾಯಿ-ಮಗು ಮೃತಪಟ್ಟಿರುವ ದಾರುಣ ಘಟನೆಯೊಂದು ಮಹಾರಾಷ್ಟ್ರದ ತುಮ್ಸಾರ್ ರೈಲು ನಿಲ್ದಾಣದ ಸಮೀಪ ನಡೆದಿದೆ.
ಪೂಜಾ (27) ಹಾಗೂ 18 ತಿಂಗಳ ಮಗು ಅಥರ್ವ್ ಮೃತಪಟ್ಟ ದುರ್ದೈವಿಗಳು.
ಪೂಜಾ ಪತಿ ಇಶಾಂತ್ ಮಧ್ಯಪ್ರದೇಶದ ರೇವಾದಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಅವರ ಜತೆ ರೇವಾದಿಂದ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಈ ದುರಂತ ನಡೆದಿದೆ.
ಇಶಾಂತ್ - ಪೂಜಾ ದಂಪತಿ ಹಾಗೂ ಮಗು ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ಶೌಚಗೃಹಕ್ಕೆ ಹೋಗಬೇಕಿತ್ತು. ಆಗ ಮಗುವನ್ನು ಶೌಚ ಮಾಡಲೆಂದು ಪೂಜಾ ಹೋಗಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಅವರು ವಾಪಸ್ ಬಂದಿರಲಿಲ್ಲ. ಪತಿ ಶೌಚಗೃಹಕ್ಕೆ ಹೋಗಿ ನೋಡಿದಾಗ ಪತ್ನಿ ಹಾಗೂ ಮಗು ನಾಪತ್ತೆಯಾಗಿದ್ದರು. ಎಲ್ಲಿ ಹುಡುಕಾಡಿದರೂ ಅವರು ಪತ್ತೆಯಾಗದ ಕಾರಣ ಆತಂಕಗೊಂಡ ಇಶಾಂತ್ ಗೊಂಡಾ ರೈಲು ನಿಲ್ದಾಣದಲ್ಲಿ ಪೊಲೀಸ್ ದೂರು ದಾಖಲು ಮಾಡಿದ್ದರು.
ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಅವರಿಗೆ ವೈಗಂಗಾ ನದಿ ಸೇತುವೆ ಮೇಲೆ ಮಹಿಳೆಯೊಬ್ಬರ ಮೃತದೇಹ ದೊರಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜತೆಗೆ ಮಗುವಿನ ಮೃತದೇಹವೂ ಪತ್ತೆಯಾಗಿತ್ತು. ತಾಯಿ-ಮಗುವಿನ ಮೃತದೇಹಕ್ಕೂ ಇಶಾಂತ್ ಹೇಳಿದ ಮಾಹಿತಿಗೂ ತಾಳೆ ಇದ್ದುದರಿಂದ ಮೃತದೇಹವನ್ನು ಗುರುತಿಸಲು ಇಶಾಂತ್ ರನ್ನು ಕರೆಯಲಾಗಿತ್ತು. ಮೃತದೇಹವನ್ನು ನೋಡಿ ಇಶಾಂತ್ ಪತ್ನಿ ಮತ್ತು ಮಗುವೆಂದು ಗುರುತಿಸಿದ್ದಾರೆ.
ಶೌಚಕ್ಕೆಂದು ಹೋದಾಗ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಅದನ್ನು ರಕ್ಷಿಸಲು ಹೋಗಿ ಪೂಜಾ ಅವರೂ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೂ ಈ ಬಗ್ಗೆ ತನಿಖೆ ಮುಂದುವರೆದಿದೆ. ಇಷ್ಟೆಲ್ಲಾ ನಡೆದರೂ ಅಲ್ಲಿ ಯಾರೂ ಇದನ್ನು ನೋಡಲಿಲ್ಲವೇ ಎಂಬ ಪ್ರಶ್ನೆ ಉಂಟಾಗಿದೆ. ಸೂಕ್ತ ತನಿಖೆಯ ನಂತರವಷ್ಟೇ ನಿಜಾಂಶ ಬೆಳಕಿಗೆ ಬರಬೇಕಿದೆ.