
ತಂಗಿ ಮೃತಪಟ್ಟರೂ ಯಾರಿಗೂ ಹೇಳದೆ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಅಕ್ಕ: ಈ ಸಹೋದರಿಯರ ಬದುಕೇ ಕರುಣಾಜನಕ
Thursday, January 20, 2022
ತೆಲಂಗಾಣ: ಅನಾರೋಗ್ಯದಿಂದ ಸಹೋದರಿ ಮೃತಪಟ್ಟರೂ ಯಾರಿಗೂ ವಿಷಯ ತಿಳಿಸದೆ ಮನೆಯೊಳಗೆ ಮೃತದೇಹದೊಂದಿಗೆ ಅಕ್ಕ ನಾಲ್ಕು ದಿನ ಕಾಲ ಕಳೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೆದ್ದಪಲ್ಲಿ ಪಟ್ಟಣದ ಪ್ರಗತಿನಗರದ ಮನೆಯಲ್ಲಿ ಅಕ್ಕ ಸ್ವಾತಿ(26) ಹಾಗೂ ತಂಗಿ ಶ್ವೇತಾ ವಾಸವಿದ್ದರು. ಶ್ವೇತಾ(24) ಎಂಬಿಎ ಪಧವೀದರೆ. ಎಂಟೆಕ್ ಓದಿರುವ ಸ್ವಾತಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ಒಂದು ವಾರದಿಂದ ಶ್ವೇತಾ ಜ್ವರದಿಂದ ಬಳಲುತ್ತಿದ್ದು, ವೈದ್ಯರನ್ನು ಸಂಪರ್ಕ ಮಾಡಿ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ದಿನದಿಂದ ದಿನಕ್ಕೆ ಆಕೆಯ ಆರೋಗ್ಯ ಹದಗೆಟ್ಟು ಉಸಿರಾಟ ಸಮಸ್ಯೆ ಉಂಟಾಗಿ ಮನೆಯಲ್ಲೇ ಮೃತಪಟ್ಟಿದ್ದಾಳೆ. ಆದರೆ ಅಕ್ಕ ಸ್ವಾತಿ ತಂಗಿ ಮೃತಪಟ್ಟ ಬಗ್ಗೆ ಯಾರಿಗೂ ತಿಳಿಸದೆ ಮೃತದೇಹದೊಂದಿಗೆ ನಾಲ್ಕು ದಿನ ಕಳೆದಿದ್ದಾಳೆ. ಮೃತದೇಹ ಕೊಳೆತು ದುರ್ವಾಸನೆ ಬೀರುತ್ತಿದ್ದರೂ ಅಕ್ಕ ಯಾರಿಗೂ ಹೇಳಿಲ್ಲ. ಆದರೆ ನೆರೆಹೊರೆಯ ಮನೆಯವರು ದುರ್ವಾಸನೆ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಶ್ವೇತಾ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಅಕ್ಕ ಸ್ವಾತಿಯನ್ನು ವಿಚಾರಣೆ ನಡೆಸಿದಾಗ ತಂಗಿ ಅನಾರೋಗ್ಯದಿಂದ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಕೊಳೆತ ಮೃತದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಸ್ವಾತಿ ಕೆಲ ಸಮಯಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆಯೇ ತಂದೆ - ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಅಕ್ಕ - ತಂಗಿ ಇಬ್ಬರೂ ಅಜ್ಜಿಯಂದಿರ ಆಶ್ರಯದಲ್ಲೇ ಬೆಳೆದಿದ್ದರು. ಇತ್ತೀಚಿಗೆ ಅಜ್ಜಿಂದಿರೂ ಮೃತಪಟ್ಟಿದ್ದಾರೆ. ಅಜ್ಜಿಯಂದಿರು ಸತ್ತಾಗಲೂ ಎರಡ್ಮೂರು ದಿನ ಅಕ್ಕ-ತಂಗಿ ಯಾರಿಗೂ ವಿಚಾರ ತಿಳಿಸಿರಲಿಲ್ಲ ಎಂಬ ವಿಚಾರವೂ ಬೆಳಕಿಗೆ ಬಂದಿದೆ.