
ಮೃತಪಟ್ಟರೆಂದು ಚಿತೆ ಅಣಿಗೊಳಿಸಿದ ಬಳಿಕ ಮೃತವ್ಯಕ್ತಿ ಕಣ್ಣು ಬಿಟ್ಟು ಉಸಿರಾಟ ನಡೆಸಿದ: ಇದೆಂಥಹಾ ಅಚ್ಚರಿ!!!
Friday, January 21, 2022
ಮಂಗಳೂರು: ಆಸ್ಪತ್ರೆಯಲ್ಲಿದ್ದ ವೃದ್ಧರೋರ್ವರು ಮಡಿದನೆಂದು ವೈದ್ಯರು ಘೋಷಿಸಿದ್ದರಿಂದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಅಣಿ ಮಾಡುತ್ತಿದ್ದು, ಇನ್ನೇನು ಅಂತ್ಯಕ್ರಿಯೆ ನಡೆಸಬೇಕೆನ್ನುವಷ್ಟರಲ್ಲಿ ಅವರು ಕಣ್ಣು ಬಿಟ್ಟು ಉಸಿರಾಟ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವಾಂತಿಚ್ಚಾಲ್ ನಿವಾಸಿ ಗುರುವ (60) ಎಂಬವರನ್ನು ವಯೋಸಹಜ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರೋಗಿ ಆಕ್ಸಿಜನ್ ಸಹಾಯದಿಂದ ಉಸಿರಾಟ ನಡೆಯುತ್ತಿದ್ದರು. ಆಕ್ಸಿಜನ್ ತೆಗೆದರೆ ಆತ ಮರಣ ಹೊಂದುತ್ತಾರೆಂದು ಸಂಬಂಧಿಕರಿಗೆ ವೈದ್ಯರು ತಿಳಿಸಿದ್ದರು.
ಅವರು ಬದುಕಿ ಉಳಿಯುವ ಸಾಧ್ಯತೆ ಇಲ್ಲದಿರುವುದರಿಂದ ಆಕ್ಸಿಜನ್ ತೆರವು ಮಾಡಲು ಸಂಬಂಧಿಕರೇ ತಿಳಿಸಿದಂತೆ ಆಕ್ಸಿಜನ್ ತೆರವು ಮಾಡಲಾಗಿತ್ತು. ಆಕ್ಸಿಜನ್ ತೆಗೆದ ಬಳಿಕ ಆತ ಮೃತಪಟ್ಟಿದ್ದಾರೆಂದು ಆ್ಯಂಬುಲೆನ್ಸ್ನಲ್ಲಿ ಮನೆಗೆ ಕೊಂಡೊಯ್ಯಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಚಿತೆಯನ್ನೂ ಸಿದ್ಧತೆ ಮಾಡಲು ಸೂಚಿಸಲಾಗಿತ್ತು.
ಆದರೆ, ಆ್ಯಂಬುಲೆನ್ಸ್ನಲ್ಲಿ ಮೃತದೇಹವನ್ನು ಕೊಂಡೊಯ್ಯುತ್ತಿರುವಾಗ ಕಾಸರಗೋಡು ಜಿಲ್ಲೆಯ ಉಪ್ಪಳ ಎಂಬಲ್ಲಿ ಗುರುವ ಅವರ ದೇಹದಲ್ಲಿ ಚಲನೆ ಕಂಡು ಬಂದಿದೆ. ಸ್ವಲ್ಪ ಹೊತ್ತಿನಲ್ಲಿ ಕಣ್ಣುಬಿಟ್ಟ ಅವರು ಉಸಿರಾಟ ಆರಂಭಿಸಿದ್ದರು. ಕೂಡಲೇ ಅವರನ್ನು ಬದಿಯಡ್ಕದ ಕ್ಲಿನಿಕ್ಗೆ ಕರೆದೊಯ್ದಾಗ ಆತ ಜೀವಂತವಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಬಳಿಕ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.