
ಮಂಗಳೂರು: ಹೊಟ್ಟೆಯಲ್ಲಿಯೇ ಶಿಶು ಮೃತ್ಯು, ಸಂಜೆ ವೇಳೆ ಗರ್ಭಿಣಿಯೂ ಸಾವು; ಕುಟುಂಬಸ್ಥರ ಆಕ್ರೋಶ
Saturday, January 22, 2022
ಮಂಗಳೂರು: ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿ ಹಾಗೂ ಮಗು ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿನ್ನೆ ನಡೆದಿದೆ.
ನಿನ್ನೆ ಬೆಳಗ್ಗೆ ವಿಟ್ಲದ ಸವಿತಾ ಎಂಬಾಕೆಯನ್ನು ಹೆರಿಗೆಗೆಂದು ಅವರ ಕುಟುಂಬಸ್ಥರು ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಗರ್ಭಿಣಿಯನ್ನು ಪರಿಶೀಲಿಸಿದ ವೈದ್ಯರು ಗರ್ಭಿಣಿಯ ಹೊಟ್ಟೆಯಲ್ಲಿಯೇ ಶಿಶು ಮೃತಪಟ್ಟಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಸಂಜೆಯ ವೇಳೆಗೆ ಗರ್ಭಿಣಿ ತಾಯಿಯೂ ಮೃತಪಟ್ಟಿದ್ದಾರೆ. ಮೃತಪಟ್ಟ ಮಗುವನ್ನು ಶೀಘ್ರವಾಗಿ ಹೊಟ್ಟೆಯಿಂದ ತೆಗೆಯದಿರೋದೇ ಗರ್ಭಿಣಿ ಮೃತಪಡಲು ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಕುಟುಂಬಸ್ಥರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.