
ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡುತ್ತಾ, ಕಣ್ಣೀರಧಾರೆ ಹರಿಸಿದ 'ದೀಪ್ತಿ ಸುನೈನಾ': ಸಾಂತ್ವನ ಹೇಳಿದ ನೆಟ್ಟಿಗರು
Tuesday, January 4, 2022
ಹೈದರಾಬಾದ್: ತೆಲುಗು ಯೂಟ್ಯೂಬ್ ಸರ್ಕಲ್ನಲ್ಲಿ ಸಖತ್ ಫೇಮಸ್ ಆಗಿರುವ ಶಾನು ಅಲಿಯಾಸ್ ಷಣ್ಮುಖ ಜಸ್ವಂತ್ ಹಾಗೂ ದೀಪ್ತಿ ಸುನೈನಾ ಎಂಬ ಜೋಡಿ ಬ್ರೇಕ್ ಅಪ್ ಆಗಿರುವ ಸುದ್ದಿ ಈಗ ಗುಟ್ಟಾಗಿ ಉಳಿಯದೆ ಜಗಜ್ಜಾಹಿರ ಆಗಿರೋದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದು ಶಾನು ಅಲಿಯಾಸ್ ಷಣ್ಮಖ್ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಸಂದರ್ಭದಲ್ಲಿ ಬಯಲಾಗಿತ್ತು. ಈ ಬಗ್ಗೆ ಸ್ವತಃ ಷಣ್ಮುಖ್ ಹಾಗೂ ದೀಪ್ತಿ ಕೂಡ ಒಪ್ಪಿಕೊಂಡಿದ್ದರು.
ಆದರೆ, ಇವರಿಬ್ಬರ ಪ್ರೀತಿಗೆ ಬಿಗ್ಬಾಸ್ ಸೀಸನ್ - 5 ತಿಲಾಂಜಲಿ ಇಡುವಂತೆ ಮಾಡಿದೆ. ಆದ್ದರಿಂದ ಹೊಸ ವರ್ಷದಂದೇ ದೀಪ್ತಿ ಸುನೈನಾ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್ ಹೇಳಿದ್ದರು. ಇದೀಗ ಆಕೆ ತಮ್ಮ 'ಲವ್ ಲೈಫ್' ಬಗ್ಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡುತ್ತಾ, ಕಣ್ಣೀರಧಾರೆ ಹರಿಸಿದ್ದಾರೆ.
ಬ್ರೇಕಪ್ಗೆ ಕಾರಣವೇನೆಂದು ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪ್ತಿ, 'ನಾನು ನನ್ನ ವೃತ್ತಿ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲು ಬಯಸಿದ್ದೇನೆ ಇದುವರೆಗೂ ನಾನು ನನ್ನ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಅಲ್ಲದೆ ನನ್ನ ವೃತ್ತಿ ಜೀವನದ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದೆ. ಆದರೆ, ಇದೀಗ ನಾನು ನನ್ನನ್ನು ಹೆಚ್ಚು ಪ್ರೀತಿಸಬೇಕು ಅಂದುಕೊಂಡಿದ್ದೇನೆ ಎಂದು ಹೇಳುವಾಗಲೇ ಗದ್ಗದಿತರಾದ ದೀಪ್ತಿ ಸುನೈನಾ ದುಃಖ ತಡೆಯಲಾರದೆ ಕಣ್ಣೀರಧಾರೆಯನ್ನು ಹರಿಸಿದರು.
ದೀಪ್ತಿ ಕಣ್ಣೀರು ಹಾಕುವುದನ್ನು ನೋಡಿ ಮರುಗಿದ ನೆಟ್ಟಿಗರು ಧೈರ್ಯವಾಗಿರಿ ಎಂದು ಹೇಳಿದ್ದಾರೆ. ಅಲ್ಲದೆ, 'ನಿಮ್ಮ ವೃತ್ತಿ ಜೀವನದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ. ಆಗಿದ್ದನ್ನೆಲ್ಲ ಮರೆತು ಬಿಡಿ, ಮುಂದೆ ಖಂಡಿತ ಒಳ್ಳೆಯದಾಗಲಿದೆ' ಎಂದು ಸಾಂತ್ವಾನದ ಮಾತುಗಳನ್ನು ಆಡಿದ್ದಾರೆ.
ಶಾನು ಹಾಗೂ ದೀಪ್ತಿಯ ಮಧ್ಯೆ ಬ್ರೇಕಪ್ ಆಗಿದೆ ಎಂಬ ವಿಚಾರ ಕೆಲ ಸಮಯಗಳ ಹಿಂದೆಯೇ ಬಯಲಾಗಿತ್ತು. ಶಾನು ಕ್ಯಾಪ್ಟನ್ ಆದ ಬಳಿಕ ಪ್ರತಿಸ್ಪರ್ಧಿ ಸಿರಿಯವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ಅವರಿಬ್ಬರ ಮಧ್ಯೆ ಭಾರಿ ಸಲುಗೆ ಇರುವಂತೆ ತೋರುತ್ತಿತ್ತು. ಈ ಎಪಿಸೋಡ್ ಅನ್ನು ನೋಡಿದ ದೀಪ್ತಿ ಬಹಳ ಕೋಪಗೊಂಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.
ಅಲ್ಲದೆ ಶಾನು ಮತ್ತು ಸಿರಿ ಬಹಳ ಸಲುಗೆಯಿಂದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್ಸ್ಟಾಗ್ರಾಂ ಫಾಲೋವರ್ಸ್ ಲೀಸ್ಟ್ನಿಂದ ಶಾನು ಅನ್ನು ಅನ್ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್ಬಾಸ್ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು.
ಇದೀಗ ದೀಪ್ತಿ ಅಧಿಕೃತವಾಗಿ ಲವ್ ಬ್ರೇಕಪ್ ಮಾಡಿಕೊಳ್ಳುವ ಮೂಲಕ ಅನುಮಾನವನ್ನು ನಿಜವಾಗಿಸಿದ್ದಾರೆ. ಇತ್ತ ಸಿರಿಗೂ ಮೊದಲೇ ಬಾಯ್ಫ್ರೆಂಡ್ ಇದ್ದಾನೆ. ಆತನ ಹೆಸರು ಶ್ರೀಹಾನ್. ಇದೀಗ ಆತ ತನ್ನ ಮೊಬೈಲ್ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್ಬಾಸ್ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಒಂದು ಪ್ರೀತಿ ಬ್ರೇಕ್ ಆಗಿದೆ.