
ವಿದ್ಯಾರ್ಥಿನಿಯೊಂದಿಗೆ ರೊಮ್ಯಾನ್ಸ್ ಮಾಡಿದ್ದ ಮೈಸೂರಿನ ಶಾಲೆಯೊಂದರ ಮುಖ್ಯಶಿಕ್ಷಕ ಸೇವೆಯಿಂದ ಅಮಾನತು
Saturday, January 29, 2022
ಮೈಸೂರು: ಇತ್ತೀಚೆಗಷ್ಟೇ ಮೈಸೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಂದಿಗೆ ಮುಖ್ಯಶಿಕ್ಷಕ ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಈ ಸಂದರ್ಭ ಕಾಮುಕ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರೀ ಆಗ್ರಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮುಖ್ಯಶಿಕ್ಷಕನನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ.
ಕಾಮುಕ ಮುಖ್ಯಶಿಕ್ಷಕ ಆರ್.ಎಂ.ಅನಿಲ್ ಕುಮಾರ್ ನನ್ನು ಸೇವೆಯಿಂದಲೇ ಖಾಯಂ ವಜಾಗೊಳಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಈತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಶಾಲೆಯೊಂದರ ಕೊಠಡಿಯೊಳಗೆ ವಿದ್ಯಾರ್ಥಿನಿಯನ್ನು ಈ ಮುಖ್ಯಶಿಕ್ಷಕ ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯವನ್ನು ಕೆಲ ವಿದ್ಯಾರ್ಥಿಗಳು ಕಿಟಕಿಯಿಂದ ವೀಡಿಯೋ ಮಾಡಿದ್ದರು. ಕಿಟಕಿ ಬಳಿ ವೀಡಿಯೋ ವಿದ್ಯಾರ್ಥಿಗಳು ಮಾಡುತ್ತಿರುವುದನ್ನು ನೋಡಿದ ತಕ್ಷಣ ವಿದ್ಯಾರ್ಥಿನಿಯನ್ನು ಬಿಟ್ಟು ಮುಖ್ಯಶಿಕ್ಷಕ ಸುಮ್ಮನೆ ನಿಲ್ಲುವುದು ಹಾಗೂ ವಿದ್ಯಾರ್ಥಿನಿ ಕೊಠಡಿಯಿಂದ ಹೊರ ಹೋಗುವ ದೃಶ್ಯ ವೈರಲ್ ವೀಡಿಯೋದಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಬಿಇಒ ಚಂದ್ರಕಾಂತ್ ಮತ್ತು ಡಿಡಿಪಿಐ ರಾಮಚಂದ್ರರಾಜೇ ಅರಸ್ ಈಗಾಗಲೇ ತಿಳಿಸಿದ್ದಾರೆ.