
ಪಿಯುಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವೀಡಿಯೋ ಮಾಡಿ, ಬ್ಲಾಕ್ ಮೇಲ್: ತಡವಾಗಿ ಪ್ರಕರಣ ಬೆಳಕಿಗೆ
Monday, January 10, 2022
ಜಿಂದ್: ಹರ್ಯಾಣ ರಾಜ್ಯದ ಜಿಂದ್ ಜಿಲ್ಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಕಾಮುಕರು ಕೃತ್ಯದ ವೀಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ದುರ್ಘಟನೆಯು ಜಿಂದ್ ಜಿಲ್ಲೆಯ ಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕಳೆದ ವರ್ಷದ ಆಗಸ್ಟ್ 5ರಂದು ಘಟನೆ ನಡೆದಿತ್ತು. ಆರೋಪಿಗಳ ಕಾಟದಿಂದ ಬೇಸತ್ತ ಬಾಲಕಿ ಇದೀಗ ಮನೆಯಲ್ಲಿ ವಿಚಾರವನ್ನು ಹೇಳಿರುವುದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
16 ವರ್ಷದ ಪಿಯುಸಿ ವಿದ್ಯಾರ್ಥಿನಿಯು ಪಕ್ಕದ ಮನೆಯ ಮಹಿಳೆಯನ್ನು ಭೇಟಿಯಾಗಲೆಂದು ತೆರಳಿದ್ದಳು. ಈ ವೇಳೆ ಇಬ್ಬರು ಕಾಮುಕರು ಆಕೆಯನ್ನು ಅತ್ಯಾಚಾರ ನಡೆಸಿದ್ದಾರೆ. ಅದಲ್ಲದೆ ಕೃತ್ಯದ ವೀಡಿಯೋ ಚಿತ್ರೀಕರಣವನ್ನೂ ಮಾಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ವೀಡಿಯೋವನ್ನು ವೈರಲ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಆರೋಪಿಗಳು ಹಣಕ್ಕಾಗಿ ಬಾಲಕಿಯನ್ನು ಪದೇ ಪದೇ ಬ್ಲಾಕ್ ಮೇಲ್ ಮಾಡಿದ್ದಾರೆ.
ಆರೋಪಿಗಳ ಸತತ ಕಾಟದಿಂದ ಬೇಸತ್ತ ಬಾಲಕಿ ಕೊನೆಗೆ ಮನೆಯಲ್ಲಿ ಈ ವಿಚಾರವನ್ನು ತಿಳಿಸಿದ್ದಾಳೆ. ಶನಿವಾರ ರಾತ್ರಿ ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪಕ್ಕದ ಮನೆಯ ಮಹಿಳೆ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.