
ಮೈಸೂರು: ಅಣ್ಣನ ಮೃತದೇಹವನ್ನು ನೋಡಿ ತಂಗಿ ಹೃದಯಾಘಾತವಾಗಿ ಮೃತ್ಯು!
Wednesday, January 12, 2022
ಮೈಸೂರು: ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮೃತದೇಹವನ್ನು ನೋಡಿ ತೀವ್ರ ಹೃದಯಾಘಾತಕ್ಕೊಳಗಾದ ಸಹೋದರಿಯೂ ಇಹಲೋಕ ತ್ಯಜಿಸಿರುವ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಕೊಡಗಿನ ಪೊನ್ನಪೇಟೆಯ ನಿವಾಸಿ ಮಂಜುನಾಥ್ ಮತ್ತು ರತ್ನ ದಂಪತಿ ಪುತ್ರಿ ರಶ್ಮಿ(21) ಮೃತಪಟ್ಟಿರುವ ಯುವತಿ.
ರಶ್ಮಿ ಮೈಸೂರಿನ ವಿಜಯ ನಗರದಲ್ಲಿ ವಾಸವಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ರಶ್ಮಿಯ ದೊಡ್ಡಪ್ಪನ ಪುತ್ರ ಕೀರ್ತಿರಾಜ್ ಸೋಮವಾರ ರಾತ್ರಿ ಹುಣಸೂರು ತಾಲೂಕಿನ ಮೈಸೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸಹೋದರನ ಮೃತದೇಹ ನೋಡಲು ರಶ್ಮಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ್ದಳು.
ಈ ಸಂದರ್ಭ ಅಣ್ಣನ ಮೃತದೇಹ ಕಂಡು ಆಕೆ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಪೋಷಕರು ರಶ್ಮಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ಹೊತ್ತಿಗಾಗಲೇ ಆಕರ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ರಶ್ಮಿಯೂ ಮೃತಪಟ್ಟಿರುವುರಿಂದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.