
ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದಾತ ಕುಸಿದು ಬಿದ್ದು ಸಾವು: ತಮಾಷೆ ಅಂದುಕೊಂಡರೆ ಆತನ ಉಸಿರೇ ನಿಂತಿತ್ತು
Monday, January 24, 2022
ಬೇತುಲ್ (ಮಧ್ಯಪ್ರದೇಶ): ಸಾವು ಎಂಬುದು ಯಾರಿಗೆ ಹೇಗೆ ಯಾವಾಗ ಬರುತ್ತದೆ ಎಂದು ಹೇಳುವುದೇ ಕಷ್ಟ. ಈ ಘಳಿಗೆವರೆಗೆ ಸರಿಯಿದ್ದ ವ್ಯಕ್ತಿ ಕ್ಷಣ ಮಾತ್ರದಲ್ಲಿಯೇ ಮೃತಪಡುವ ಘಟನೆಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ದುರ್ಘಟನೆಯೊಂದು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಡೋರಿ ಗ್ರಾಮದಲ್ಲಿ ಸಂಭವಿಸಿದೆ.
ವಿವಾಹ ಸಂಭ್ರಮದ ನಡುವೆ ಡ್ಯಾನ್ಸ್ ಮಾಡುತ್ತಿದ್ದ ವರನ ಸಂಬಂಧಿಯೊಬ್ಬ ಇದ್ದಕ್ಕಿದ್ದಂತೆ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಹಾಡಿಗೆ ತಕ್ಕಂತೆ ಸಂತೋಷದಿಂದ ನರ್ತಿಸುತ್ತಿದ್ದಂತೆ ಈತ ದಿಢೀರ್ ಎಂದು ಮೃತಪಟ್ಟಿದ್ದಾನೆ. ಇದೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಆತ ಕುಸಿದು ಬೀಳುವ ವೀಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಆತ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆಯೇ ಆತ ಕುಸಿದುಬಿದ್ದಿದ್ದಾನೆ. ಆಗ ಅಲ್ಲಿದ್ದವರು ಅದನ್ನು ತಮಾಷೆ ಮಾಡೋದು ಎಂದುಕೊಂಡಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಆತ ಮೇಲೇಳದಿದ್ದಾಗ ಹತ್ತಿರ ಬಂದು ನೋಡಿದಾಗ ಆತನ ಉಸಿರೇ ನಿಂತು ಹೋಗಿತ್ತು.
ತಕ್ಷಣ ಆತನನ್ನು ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವೈದ್ಯರ ಪ್ರಕಾರ, ಆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.