
ಪೆಟ್ರೋಲ್ ಬೆಲೆಯೇರಿಕೆಯಿಂದ ಕುದುರೆಯೇರಿ ಪ್ರಯಾಣ ಮಾಡುತ್ತಿರುವ ಉದ್ಯಮಿ: ವಿನೂತನ ಪ್ರಯೋಗ
Sunday, January 2, 2022
ವಿಜಯಪುರ: ನೂರರ ಗಡಿ ದಾಟಿರುವ ಪೆಟ್ರೋಲ್ ದರ ಸದ್ಯಕ್ಕೆ ಇಳಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಈ ಬೆಲೆಯೇರಿಕೆಯಿಂದ ಕಂಗಾಲಾದ ಹಲವು ಮಂದಿ ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಬಸ್ಗಳಲ್ಲಿ ಓಡಾಟ ಮಾಡಲು ಆರಂಭಿಸಿದ್ದಾರೆ. ಮತ್ತೂ ಕೆಲವರು ಎಲ್ಲೆಲ್ಲಿ ಪೆಟ್ರೋಲ್ ಖರ್ಚನ್ನು ಉಳಿಸಲು ಸಾಧ್ಯವೋ, ಅಲ್ಲೆಲ್ಲಾ ಉಳಿಕೆ ಮಾಡುವ ಪ್ರಯತ್ನವನ್ನೆಲ್ಲಾ ಮಾಡಲು ಆರಂಭಿಸಿದ್ದಾರೆ.
ಆದರೆ, ಇಲ್ಲೊಬ್ಬ ಉದ್ಯಮಿ ಮಾಡಿರುವ ಕೆಲಸವು ಎಲ್ಲರ ಗಮನವನ್ನು ಸೆಳೆದಿದೆ. ಪೆಟ್ರೋಲ್ ದರ ಹೆಚ್ಚಾಗಿ ಪ್ರಯಾಣ ದುಬಾರಿ ಆಗಿರುವುದರಿಂದ ಇವರು ಕುದುರೆಯೊಂದನ್ನು ಖರೀದಿಸಿ ಅದರಲ್ಲೇ ಪ್ರಯಾಣ ಮಾಡಲು ಆರಂಭಿಸಿದ್ದಾರೆ. ಇದನ್ನು ಕೇಳಲು ತಮಾಷೆ ಎನಿಸಬಹುದು. ಆದರೆ, ಪೆಟ್ರೋಲ್ ಬೆಲೆ ಓರ್ವ ಉದ್ಯಮಿ ಮೇಲೆಯೇ ಇಷ್ಟೊಂದು ಪ್ರಭಾವ ಬೀರಿರಬೇಕಾದರೆ, ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ತಮ್ಮ ತಲೆಗೆ ಬರದೇ ಇರದು.
ವಿಜಯಪುರ ಮೂಲದ ಉದ್ಯಮಿ ಬಾಬುಲಾಲ್ ಚೌಹಾಣ್ (49) ಎಂಬ ಉದ್ಯಮಿ ಈ ವಿನೂತನ ಐಡಿಯಾವನ್ನು ಕಾರ್ಯರೂಪಕ್ಕೆ ತಂದವರು. ಇತ್ತೀಚೆಗಷ್ಟೇ ಅವರೊಂದು ಗುಜರಾತಿ ಕುದುರೆಯನ್ನು ಖರೀದಿ ಮಾಡಿದ್ದಾರೆ. ಇದು ಕೇವಲ ಪ್ರಯಾಣಕ್ಕಾಗಿ ಮಾತ್ರವಲ್ಲ, ಬದಲಾಗಿ ದೇಹದ ಫಿಟ್ನೆಸ್ ಗೂ ನೆರವಾಗುತ್ತದೆ ಎಂದು ಬಾಬುಲಾಲ್ ಹೇಳಿದ್ದಾರೆ.
ಅವರು ಪ್ರತಿ ತಿಂಗಳು ಜಿಮ್ಗೆಂದು 4 ಸಾವಿರ ರೂ. ಖರ್ಚು ಮಾಡುತ್ತಿದ್ದರಂತೆ. ಅಲ್ಲದೆ, ಪೆಟ್ರೋಲ್ಗೂ ಕೂಡ ಖರ್ಚಾಗುತ್ತಿತ್ತಂತೆ. ಇದೀಗ ಕುದುರೆ ಖರೀದಿಸಿರುವ ಬಾಬುಲಾಲ್ಗೆ ಎರಡೆರಡು ಖರ್ಚು ಉಳಿಯುತ್ತಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಅವರು ಕುದುರೆ ಸವಾರಿಯಿಂದ ದೇಹದ ಫಿಟ್ನೆಸ್ ಚೆನ್ನಾಗಿ ಇಟ್ಟುಕೊಳ್ಳಬಹುದು. ಅಲ್ಲದೆ, ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿ ಆಗುತ್ತದೆ ಎಂದಿದ್ದಾರೆ.
ಬಾಬುಲಾಲ್ ಪ್ರತಿದಿನ ಮನೆಯಿಂದ ಕಚೇರಿಗೆ 30 ಕಿ.ಮೀ. ದೂರ ಪ್ರಯಾಣ ಮಾಡುತ್ತಾರೆ. 6 ಮಂದಿಯ ಇವರ ಕುಟುಂಬದಲ್ಲಿ ಒಂದು ಕಾರು ಮತ್ತು 4 ಬೈಕ್ಗಳಿವೆ. ಇದೀಗ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ನೂರರ ಗಡಿ ದಾಟಿರುವುದರಿಂದ, ಯಾರೊಬ್ಬರು ಬಾಬುಲಾಲ್ ನಿರ್ಧಾರವನ್ನು ಗೇಲಿ ಮಾಡಲು ಆಗುವುದಿಲ್ಲ. ಏಕೆಂದರೆ, ಪೆಟ್ರೋಲ್ ದರ ಹೆಚ್ಚಳದ ಬರೆ ಎಲ್ಲರಿಗೆ ತಗುಲಿರುವುದು ನೂರಕ್ಕೆ ನೂರು ಸತ್ಯ.