
ಮಂಗಳೂರು: 'ಒಂದು ತಿಂಗಳೊಳಗೆ ಅವರನ್ನೂ ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ' ಕೊರಗಜ್ಜ ದೈವದ ನುಡಿ
Saturday, January 8, 2022
ಮಂಗಳೂರು: ಮದುವೆಯ ಸಂಭ್ರಮದಲ್ಲಿ ಮದುಮಗನಿಗೇ ತುಳುನಾಡಿನ ಕೊರಗಜ್ಜ ದೈವ ವೇಷ ತೊಡಿಸಿ ಅವಮಾನ ಮಾಡಿರುವ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಕೊರಗಜ್ಜ ದೈವವೇ ಆವೇಶದಲ್ಲಿ ಕೃತ್ಯ ಎಸಗಿದವರನ್ನು 'ಒಂದು ತಿಂಗಳೊಳಗೆ ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ' ಎಂದು ಅಭಯ ನೀಡಿರುವ ವೀಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ವಿಟ್ಲದ ಸಾಲೆತ್ತೂರು ಎಂಬಲ್ಲಿ ಮದುವೆ ಸಂಭ್ರಮಾಚರಣೆಯಲ್ಲಿ ಮುಸ್ಲಿಂ ಯುವಕರು ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷವನ್ನು ವರನಿಗೆ ತೊಡಿಸಿ ಹಾಡು, ಕುಣಿತದೊಂದಿಗೆ ಮದುಮಗಳ ಮನೆಗೆ ಕರೆತಂದಿದ್ದರು. ಈ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಲಾಗಿದೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಭಕ್ತರು ಕೋಲ ನಡೆಯುವಾಗಲೇ ಕೊರಗಜ್ಜ ದೈವದ ಬಳಿಯೇ ದೂರಿತ್ತಿರುವ ಘಟನೆ ನಿನ್ನೆ ನಗರದ ಅತ್ತಾವರ ಬಳಿ ನಡೆದಿತ್ತು.
ಆಗ ಕೊರಗಜ್ಜ ದೈವವು, ದೈವಾವೇಶದಲ್ಲಿ ''ಭಯಪಡದಿರಿ, ನನ್ನನ್ನು ಯಾವ ರೀತಿ ಅವರು ಮರುಳನಂತೆ ಚಿತ್ರಿಸಿ ಕುಡಿದಾಡಿದರೋ, ಒಂದು ತಿಂಗಳೊಳಗೇ ಅವರನ್ನೂ ಅದೇ ರೀತಿ ಹುಚ್ಚರಂತೆ ಮಾಡಿ ಬೀದಿ ಮೆರವಣಿಗೆ ಮಾಡಿಸುವೆ" ಎಂದು ಭಕ್ತರಿಗೆ ಅಭಯ ನೀಡಿದೆ. ಇದೀಗ ಕೊರಗಜ್ಜ ದೈವ ದುಷ್ಕೃತ್ಯ ಎಸಗಿರುವ ದುಷ್ಕರ್ಮಿಗಳಿಗೆ ಯಾವ ರೀತಿ ಶಿಕ್ಷೆ ನೀಡಲಿದೆ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.