
ವರನಿಂದ ಕೊರಗಜ್ಜನ ವೇಷ ಧರಿಸಿ ನೃತ್ಯ ಮಾಡಿರುವ ಪ್ರಕರಣ: ಆರೋಪಿಗಳ ಬಿಡುಗಡೆ ಮಾಡಲು ಪ್ರಯತ್ನಿಸಿದ್ದ ಬಿಜೆಪಿ ಯುವ ಮುಖಂಡ ಅಮಾನತು
Tuesday, January 11, 2022
ಮಂಗಳೂರು: ತುಳುನಾಡ ಜನತೆಯ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ನರ್ತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮಂಗಲ್ಪಾಡಿ ನಿವಾಸಿ ಅಹ್ಮದ್ ಮುಜಿತಾಬು(28) ಹಾಗೂ ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್(19) ಬಂಧಿತ ಆರೋಪಿಗಳು. ಕಾಸರಗೋಡಿನ ಮಂಜೇಶ್ವರ ಮೂಲದವರಾದ ಆರೋಪಿಗಳಾಗಿದ್ದು, ಕೃತ್ಯದ ಪ್ರಮುಖ ಆರೋಪಿ, ಮದುಮಗ ಉಮರುಲ್ ಬಾತಿಷ್ ತಲೆಮರೆಸಿಕೊಂಡಿದ್ದಾನೆ.
ಬಾತಿಷ್ ತನ್ನ ವಿವಾಹದ ದಿನ ರಾತ್ರಿ ವಧುವಿನ ಮನೆಯಾಗಿರುವ ವಿಟ್ಲದ ಸಾಲೆತ್ತೂರಿಗೆ ಕೊರಗಜ್ಜನನ್ನು ಹೋಲುವಂತೆ ವೇಷಭೂಷಣ ಧರಿಸಿ ತನ್ನ ಸ್ನೇಹಿತರೊಂದಿಗೆ ಹಾಡು ಹಾಡಿಕೊಂಡು ನೃತ್ಯ ಮಾಡಿಕೊಂಡು ಬಂದಿದ್ದ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮುಸ್ಲಿಂ ಯುವಕರ ವರ್ತನೆಗೆ ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳೂ ನಡೆದಿದ್ದವು. ಅಲ್ಲದೆ ವರ ಉಮರುಲ್ ಬಾತಿಷ್ ಹಾಗೂ ಆತನ ಸ್ನೇಹಿತರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊರಗಜ್ಜನಿಗೆ ಅವಮಾನ ಮಾಡಿರುವ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟ ಆರೋಪಿಗಳ ಬಿಡುಗಡೆಗೆ ಒತ್ತಡ ಹಾಕಿರುವ ಆರೋಪದ ಮೇಲೆ ಬಿಜೆಪಿ ಯುವ ನಾಯಕ ಮಹಮ್ಮದ್ ಅಸ್ಗರ್ ನನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಮಹಮ್ಮದ್ ಅಸ್ಗರ್ ಪಜೀರು ಗ್ರಾಮದ ಸಾಂಬಾರ್ ತೋಟ ಬೂತ್ ಅಧ್ಯಕ್ಷರಾಗಿದ್ದರು . ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದ ಮೇಲೆ ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅಮಾನತು ಆದೇಶ ಹೊರಡಿಸಿದ್ದಾರೆ.