
Mangaluru: ಜಪ್ತಿಯಾದ ವಾಹನದ ನಂಬರ್ ಪ್ಲೇಟ್ ಅನ್ನೇ ನಕಲಿ ಮಾಡಿದ ಭೂಪ; ಹೆಲ್ಮೆಟ್ ಕದಿಯುತ್ತಿದ್ದಾಗ ಸಿಸಿ ಕ್ಯಾಮರಾದಲ್ಲಿ ಸೆರೆ
Sunday, January 9, 2022
ಮಂಗಳೂರು: ಪ್ರಕರಣವೊಂದರಲ್ಲಿ ಜಪ್ತಿಯಾಗಿದ್ದ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಅನ್ನೇ ನಕಲಿ ಮಾಡಿ ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿದ್ದ ಭೂಪನೋರ್ವನು ಹೆಲ್ಮೆಟ್ ಕದಿಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಕಣ್ಣಿಗೆ ಬಿದ್ದಿದ್ದಾನೆ. ಇದೀಗ ಪೊಲೀಸರು ಈತನ ಪತ್ತೆಗೆ ಬಲೆ ಬೀಸಿದ್ದು, ವಾಹನ ಸಹಿತ ಆರೋಪಿಯ ವೀಡಿಯೋ ವೈರಲ್ ಮಾಡಿ ಈತನ ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಪ್ರಕರಣವೊಂದರಲ್ಲಿ ಜಪ್ತಿಯಾಗಿದ್ದ ಡಿಯೋ ಸ್ಕೂಟರ್ ನಗರದ ಉತ್ತರ ಪೊಲೀಸ್ ಠಾಣೆಯಲ್ಲಿತ್ತು. ಆದರೆ ಇದೀಗ ಇದೇ ಡಿಯೋ ವಾಹನದ ನಂಬರ್ ಪ್ಲೇಟ್ KA 19 HD 6497 ಅನ್ನು ಖದೀಮನೋರ್ವನು ನಕಲಿ ಮಾಡಿ ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಆ್ಯಕ್ಟಿವ್ ಹೋಂಡಾ ವಾಹನ ಮಂಗಳೂರು ನಗರದಲ್ಲಿ ಸುತ್ತಾಡುತ್ತಿದೆ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ.
ಅಲ್ಲದೆ ಈ ಖದೀಮನು ನಗರದ ಸಿಟಿ ಸೆಂಟರ್ ಮಾಲ್ ನ ಪಾರ್ಕಿಂಗ್ ಸ್ಥಳದಲ್ಲಿದ್ದ 2 ವಾಹನಗಳ ಹೆಲ್ಮೆಟ್ ಗಳನ್ನು ಕಳವುಗೈದಿರುವ ಬಗ್ಗೆಯೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಆಗಲೇ ಈತನ ನಕಲಿ ನಂಬರ್ ಪ್ಲೇಟ್ ವಂಚನೆ ಬಯಲಾಗಿದೆ. ಇದೀಗ ದ್ವಿಚಕ್ರ ವಾಹನ ಸಹಿತ ಈತನ ವೀಡಿಯೋವನ್ನು ಬಿಡುಗಡೆ ಮಾಡಿರುವ ಪೊಲೀಸರು, ಈ ಖದೀಮನ ಸುಳಿವು ಸಿಕ್ಕರೆ ತಕ್ಷಣ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಂಬರ್ 0824-2220516, 9480805338 ನೆ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.