
ನನ್ನ ಮಗಳಿನ್ನೂ ಸಣ್ಣವಳು, ಅವಳಿಗೆ ಒಟಿಪಿ ಶೇರ್ ಮಾಡಿದರೆ ಇಷ್ಟೆಲ್ಲಾ ಯಡವಟ್ಟಾಗುತ್ತೆಂದು ಗೊತ್ತಿಲ್ಲ: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಪುತ್ರಿಯ ಬಗ್ಗೆ ಶಾಸಕ ಸ್ಪಷ್ಟನೆ
Tuesday, January 11, 2022
ಬೆಂಗಳೂರು: ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ಅವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ವಿಜಯಪುರದ ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಪುತ್ರಿಯ ಹೆಸರು ಬಹಳ ಜೋರಾಗಿ ಕೇಳಿಬರುತ್ತಿದೆ.
ಆಕೆಯ ಹೆಸರು ಕೇಳಿ ಬರುತ್ತಿದ್ದಂತೆ ಮಾಧ್ಯಮದ ಮುಂದೆ ಬಂದಿರುವ ಶಾಸಕ ಯಶವಂತರಾಯಗೌಡ ಪಾಟೀಲ್ ಮಗಳ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ. ''ಈ ಪ್ರಕರಣದಲ್ಲಿ ಸುಖಾಸುಮ್ಮನೆ ತನ್ನ ಮಗಳ ಹೆಸರನ್ನು ಎಳೆದುತರಲಾಗುತ್ತಿದೆ. ನನ್ನ ಮಗಳಿನ್ನೂ ಸಣ್ಣವಳು. ಅವಳಿಗೆ ಏನೂ ಗೊತ್ತಾಗುವುದಿಲ್ಲ. ಸುಮ್ಮನೇ ಅವಳ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ 'ನಾನು ಹಾಗೂ ಸಚಿವ ಎಸ್.ಟಿ.ಸೋಮಶೇಖರ್ ಅವರು ಒಳ್ಳೆಯ ಸ್ನೇಹಿತರು. ನಾವಿಬ್ಬರೂ ಜೊತೆಯಾಗಿ ಸಿಎಂ ಅವರನ್ನು ಭೇಟಿಯಾಗಿ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ಎಲ್ಲೋ ಏನೋ ತಪ್ಪಾಗಿ ಹೀಗೆಲ್ಲಾ ಆಗಿದೆ. ಆದ್ದರಿಂದ ಪ್ರಕರಣದ ಹಿಂದೆ ಇರುವವರನ್ನು ತನಿಖೆ ನಡೆಸಿ ಬಯಲಿಗೆಳೆಯಬೇಕಾಗಿದೆ' ಎಂದಿದ್ದಾರೆ.
'ರಾಜಕಾರಣ ಮಾಡುವವರು ನೇರವಾಗಿ ನನ್ನ ವಿರುದ್ಧ ಮಾಡಲಿ. ಅದು ಬಿಟ್ಟು ಮನೆಯವರು, ಮಕ್ಕಳನ್ನು ಯಾಕೆ ಇದರಲ್ಲಿ ಎಳೆದು ತರುತ್ತಿದ್ದಾರೆ' ಎಂದು ಅಸಮಾಧಾನ ಹೊರಹಾಕಿದರು.
ಜೊತೆಗೆ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪಾಟೀಲ್, 'ತನ್ನ ಪುತ್ರಿ ಇಂಗ್ಲೆಂಡ್‍ನಲ್ಲಿ ಎಂಎಸ್ ಕಲಿಯಲು ಹೋಗಿದ್ದು, ಸದ್ಯ ಅಮಭಾರತಕ್ಕೆ ಮರಳಿದ್ದಾಳೆ. ಆಕೆ ಕಳೆದ ಡಿಸೆಂಬರ್ 25ರಂದು ತನ್ನ ಸ್ನೇಹಿತ ರಾಕೇಶ್ ಅಣ್ಣಪ್ಪ ಎಂಬಾತನಿಗೆ ಒಂದು ಬಿಸಿನೆಸ್ ವಿಚಾರದ ಸಲುವಾಗಿ ಮೊಬೈಲ್‌ನ ಒಟಿಪಿಯೊಂದನ್ನು ನೀಡಿದ್ದಾಳೆ. ಆ ಬಳಿಕ ಆ ಓಟಿಪಿಯನ್ನು ಆತ ಬೆಂಗಳೂರಿನಲ್ಲಿರುವ ರಾಹುಲ್ ಭಟ್‍ಗೆ ಕೊಟ್ಟಿರುವುದಾಗಿ ತಿಳಿದುಬಂದಿದೆ. ಇಲ್ಲೇ ಏನೋ ಎಡವಟ್ಟಾಗಿರುವ ಸಾಧ್ಯತೆ ಇದೆ' ಎಂದರು.
'ಈಗ ಸುದ್ದಿಯಾಗುತ್ತಿರುವಂತೆ ಸಹಕಾರಿ ಸಚಿವ ಸೋಮಶೇಖರ್ ಅವರ ಪುತ್ರ ನಿಶಾಂತ್ ಮತ್ತು ತನ್ನ ಪುತ್ರಿ ಕ್ಲಾಸ್‌ಮೇಟ್ಸ್ ಕೂಡಾ ಅಲ್ಲ, ಇಬ್ಬರಿಗೂ ಯಾವುದೇ ಸಂಪರ್ಕವಿಲ್ಲ. ನನ್ನ ಪುತ್ರಿ ಇನ್ನೂ ಸಣ್ಣವಳು, ಓಟಿಪಿ ಶೇರ್ ಮಾಡಿದರೆ ಇಷ್ಟೆಲ್ಲಾ ಆಗುತ್ತೆ ಎಂದು ಆಕೆಗೂ ತಿಳಿದಿಲ್ಲ. ಸುಮ್ಮನೇ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ಅವಳೊಂದಿಗೆ ಪೊಲೀಸರು ಸಂಪರ್ಕದಲ್ಲಿ ಇದ್ದಾರೆ. ಆದ್ದರಿಂದ ಇಂಗ್ಲೆಂಡ್‌ನಿಂದ ಅವಳು ಬಂದಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತನಿಖೆಯ ನಂತರ ಸತ್ಯ ಹೊರಬೀಳಲಿದೆ' ಎಂದು ಯಶವಂತಗೌಡ ಪಾಟೀಲ್ ಹೇಳಿದರು.