
ನಾಪತ್ತೆಯಾಗಿದ್ದ ಬಾಂಗ್ಲಾ ನಟಿಯ ಮೃತದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ
Thursday, January 20, 2022
ಢಾಕಾ: ನಾಪತ್ತೆಯಾಗಿದ್ದಾರೆಂದು ಸುದ್ದಿಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಶಿಮು ಮೃತದೇಹವು ಢಾಕಾದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವೊಂದರಲ್ಲಿ ಗೋಣಿ ಚೀಲದೊಳಗೆ ಪತ್ತೆಯಾಗಿದೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
3 ದಿನಗಳ ಹಿಂದೆ ರೈಮಾ ಪತಿ ಆಕೆ ನಾಪತ್ತೆಯಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ರೈಮಾ ಮೃತದೇಹ ರೈಮಾ ಅವರ ಮೃತದೇಹವು ಹಜರತ್‌ಪುರ ಸೇತುವೆಯ ಬಳಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ರೈಮಾ ಮೃತ ದೇಹದ ಮೇಲೆ ಗಾಯದ ಗುರುತುಗಳಿದ್ದು, ಯಾರೋ ಕೊಲೆ ಮಾಡಿ ಸೇತುವೆಯ ಬಳಿ ಎಸೆದು ಹೋಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ರೈಮಾ ಅವರ ಪತಿ ಹಾಗೂ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರೈಮಾ 1998 ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈವರೆಗೆ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಕೆಲಸ ಮಾಡಿದ್ದರು.