
ಇಲ್ಲೊಬ್ಬ ತಾಯಿ, ಅಕ್ಕ, ಸೋದರಳಿಯನಿಂದಲೇ ಬರ್ಬರವಾಗಿ ಹತ್ಯೆಯಾದ: ಆತ ಮಾಡಿದ್ದಾದರೂ ಏನು?
Sunday, January 23, 2022
ರಾಯಚೂರು: ಹೆತ್ತತಾಯಿ, ಒಡಹುಟ್ಟಿದ ಅಕ್ಕ ಹಾಗೂ ಸ್ವಂತ ಸೋದರಳಿಯನಿಂದಲೇ ವ್ಯಕ್ತಿಯೋರ್ವನ ಕೊಲೆ ನಡೆದಿದ್ದು, ಅದೂ ಅಂತಿಂಥ ಕೊಲೆಯಲ್ಲ. ಮೂವರೂ ಸೇರಿ ಆತನ ತಲೆಗೆ ಕೊಡಲಿಯಿಂದ ಕಡಿದು, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಉಸಿರುಗಟ್ಟಿಸು ಕೊಲೆಗೈದಿರುವುದ್ದಲ್ಲದೆ ಮೃತದೇಹವನ್ನು ಮನೆಯಿಂದ ಹೊರಗೆಸೆದಿದ್ದರು.
ಈ ರೀತಿ ಬರ್ಬರವಾಗಿ ತನ್ನವರಿಂದಲೇ ಕೊಲೆಯಾದ ದುರ್ದೈವಿ ಅಮರೇಶ (43).
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಈ ಭೀಕರ ಹತ್ಯೆ ನಡೆದಿದೆ. ಈ ಹತ್ಯೆಯ ಸಂಬಂಧ ಅಮರೇಶನ ತಾಯಿ ಲಕ್ಷ್ಮೀ, ಅಕ್ಕ ನಿರ್ಮಲಾ ಹಾಗೂ ಸೋದರಳಿಯ ಸಂತೋಷ್ನನ್ನು ಸಿರವಾರ ಪೊಲೀಸರು ಬಂಧಿಸಿದ್ದಾರೆ. ಅಮರೇಶ್ ಪತ್ನಿ ಸೌಭಾಗ್ಯ ನೀಡಿರುವ ದೂರಿನನ್ವಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಅಮರೇಶ್ ಮದ್ಯವ್ಯಸನಿಯಾಗಿದ್ದು, ಇಸ್ಪೀಟ್ ಚಟವನ್ನೂ ಹೊಂದಿದ್ದ. ಅದಲ್ಲದೆ ಕೆಲಸಕ್ಕೆ ಹೋಗದೆ ಪ್ರತಿನಿತ್ಯವೂ ಜಗಳ ಮಾಡುತ್ತಿದ್ದ. ಆದ್ದರಿಂದ ಪತಿ ದುಡಿಯೋದಿಲ್ಲ ಎಂದು ಬೇಸತ್ತಿದ್ದ ಪತ್ನಿ ಸೌಭಾಗ್ಯ ತವರು ಮನೆ ಸೇರಿದ್ದಳು. ಮದ್ಯ, ಇಸ್ಪೀಟ್ ಚಟಕ್ಕೆ ಬಿದ್ದಿದ್ದ ಅಮರೇಶ್ ವಿಪರೀತ ಸಾಲ ಮಾಡಿಕೊಂಡಿದ್ದ.
ಚಟಕ್ಕಾಗಿ ಮಾಡಿರುವ ಸಾಲವನ್ನು ತೀರಿಸಲು ಅಮರೇಶ್ ಮನೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಆದ್ದರಿಂದ ಮೊನ್ನೆ ಇದೇ ವಿಚಾರಕ್ಕಾಗಿ ತಡರಾತ್ರಿ ಮನೆಯಲ್ಲಿ ಗಲಾಟೆಯಾಗಿತ್ತು. ಆಗ ತಾಯಿ, ಅಕ್ಕ, ಸೋದರಳಿಯ ಒಗ್ಗೂಡಿ ಅಮರೇಶನ ತಲೆಗೆ ಕೊಡಲಿಯಿಂದ ಹೊಡೆದು, ಕುತ್ತಿಗೆಗೆ ಹಗ್ಗ ಬಿಗಿದು ಕೊಂದು, ಮೃತದೇಹವನ್ನು ಮನೆಯಿಂದ ಹೊರಕ್ಕೆ ಎಸೆದಿದ್ದರು. ಬಳಿಕ ಕೊಲೆಯ ಬಗ್ಗೆ ಅನುಮಾನ ಬಾರದಂತೆ ಮನೆಯವರು ವರ್ತಿಸಿದ್ದರು. ಬೆಳಗ್ಗೆ ಸ್ಥಳೀಯರು ನೀಡಿರುವ ದೂರಿನ ಮೇರೆಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆಗಿಳಿದಾಗ ಸತ್ಯಾಂಶ ಹೊರಬಿದ್ದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.