
ಅಪ್ರಾಪ್ತ ಬಾಲಕಿಯ ವಿಚಾರದಲ್ಲಿ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ: ಏಳು ಮಂದಿ ಅರೆಸ್ಟ್
Sunday, January 30, 2022
ತುಮಕೂರು: ಹುಡುಗಿಯ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಕೊಲೆಗೈದು ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಲಾಗಿತ್ತು.
ಪ್ರಕರಣದಲ್ಲಿ ಓರ್ವ ರೌಡಿಶೀಟರ್ ಸೇರಿದಂತೆ 7 ಜನ ಆರೋಪಿಗಳನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ. ಭರತ್, ಪವನ್, ತಿಪ್ಪೇಶ್, ಅನಿಲ್, ರೌಡಿಶೀಟರ್ ವೆಂಕಟೇಶ್ ಸೇರಿ 7 ಜನ ಬಂಧಿತ ಆರೋಪಿಗಳು.
ಡಿ.11ರಂದು ಮಧುಗಿರಿಯ ಕರಡಿಪುರ ನಿವಾಸಿ ರವಿ (23) ಎಂಬಾತನ ಮೃತದೇಹವು ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಅಪಘಾತದ ಬಗ್ಗೆ ಮೃತ ರವಿಯ ಪಾಲಕರು ಅನುಮಾನ ವ್ಯಕ್ತಪಡಿಸಿ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಮಧುಗಿರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದರು. ಈ ವೇಳೆ ಅಪಘಾತದ ರೀತಿಯಲ್ಲಿ ಬಿಂಬಿಸಿದ್ದ ಪ್ರಕರಣವು ಕೊಲೆ ಎಂದು ಬೆಳಕಿಗೆ ಬಂದಿದೆ.
ಮೃತ ರವಿ ಹಾಗೂ ಆರೋಪಿ ಭರತ್ ಮಧುಗಿರಿಯ ಕರಡಿಪುರ ಎಸ್.ಎಂ. ಕೃಷ್ಣ ಬಡವಾಣೆಯ ನಿವಾಸಿಗಳು. ಆಟೋ ಓಡಿಸುವ ವೃತ್ತಿ ಮಾಡುತ್ತಿದ್ದ ರವಿ ಹಾಗೂ ಭರತ್ ಇಬ್ಬರೂ ಸ್ನೇಹಿತರು. ಇವರಿಬ್ಬರೂ ಓರ್ವಳನ್ನೇ ಪ್ರೀತಿ ಮಾಡುತ್ತಿದ್ದರು. ಈಕೆ ಅಪ್ರಾಪ್ತೆಯಾಗಿದ್ದು, ರವಿ ಬಾಲಕಿಯೊಂದಿಗೆ ಜತೆ ಓಡಿ ಹೋಗಿ ಮದುವೆಯಾಗಿದ್ದ.
ಆದರೆ ಬಾಲಕಿ ಅಪ್ರಾಪ್ತೆಯಾದ ಕಾರಣ ಆತ ಪೊಕ್ಸೊ ಕಾಯ್ದೆಯಡಿ ಜೈಲು ಸೇರಿ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ರವಿ, ತನ್ನ ಸ್ನೇಹಿತರೊಡನೆ ಕಿರಿಕ್ ಮಾಡಿಕೊಂಡಿದ್ದ. ಅಲ್ಲದೆ ರೌಡಿಶೀಟರ್ ಒಬ್ಬನ ಪೋಟೋವನ್ನು ತನ್ನ ಮೊಬೈಲ್‌ನ ಸ್ಟೇಟಸ್‌ಲ್ಲಿ ಹಾಕಿಕೊಂಡಿದ್ದ. ಇದರಿಂದ ಭರತ್ ಮತ್ತಷ್ಟು ಕೆರಳಿದ್ದು, ರೌಡಿಶೀಟರ್ ವೆಂಕಟೇಶ್ ಜೊತೆ ಸೇರಿಕೊಂಡು ಆಟೋವೊಂದರಲ್ಲಿ ರವಿಯನ್ನು ಮಧುಗಿರಿಯ ರಿಂಗ್ ರೋಡ್ ಬಳಿ ಕರೆದೊಯ್ದು, ಹಿಗ್ಗಾಮುಗ್ಗ ಥಳಿಸಿ ಕೊಲೆಗೈಯಲಾಗಿದೆ.
ಆ ಬಳಿಕ ರವಿಗೆ ಅಪಘಾತವಾಗಿದೆ ಎಂದು ಬಿಂಬಿಸಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದರು. ಆದರೆ ರವಿಯ ಪೋಷಕರ ಆರೋಪದಂತೆ ಪೊಲೀಸರು ತನಿಖೆ ಕೈಗೊಂಡಾಗ ಈ ಕೊಲೆ ಪ್ರಕರಣ ಬಯಲಾಗಿದೆ. ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆ ಆರೋಪಿಗಳು ಗೋವಾದಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ. ತಲೆಮರಿಸಿಕೊಂಡಿರುವ ಇನ್ನುಳಿದ ನಾಲ್ವರು ಆರೋಪಿಗಳಿಗೆ ಶೋಧಕಾರ್ಯ ಮುಂದುವರೆದಿದೆ.