
ಶೀಲದ ಬಗ್ಗೆ ಶಂಕೆಯಿಂದ ಪತ್ನಿಯನ್ನೇ ಹತ್ಯೆಗೈದ ಪತಿ: ಮೂರೇ ಗಂಟೆಯೊಳಗೆ ಆರೋಪಿ ಬಂಧನ
Saturday, January 22, 2022
ದಾವಣಗೆರೆ: ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪತಿಯೋರ್ವನು ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ನಡೆದಿದೆ. ಆದರೆ ಕೊಲೆ ಮಾಡಿರುವ ಮೂರೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಪತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಚೀಲಾಪುರ ಗ್ರಾಮದ ನಿವಾಸಿ ರಮೀಜಾಬೀ (45) ಕೊಲೆಯಾದ ದುರ್ದೈವಿ. ಪತಿ ಶಫೀವುಲ್ಲಾ (50) ಕೊಲೆಗೈದಿರುವ ಆರೋಪಿ.
ಶಫೀವುಲ್ಲಾ ಹಾಗೂ ರಮೀಜಾಬೀ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಶಫಿವುಲ್ಲಾ ನಿತ್ಯ ಜಗಳ ಮಾಡುತ್ತಿದ್ದ. ಇದೇ ಅನುಮಾನದಿಂದ ಶಫಿವುಲ್ಲಾ ನಿನ್ನೆ ಬೆಳಗ್ಗೆ ಪತ್ನಿ ಮನೆ ಸಮೀಪದ ಜಮೀನಿಗೆ ಬಹಿರ್ದೆಸೆಗೆ ತೆರಳಿದ್ದಾಗ ಹಿಂಬಾಲಿಸಿದ್ದಾನೆ.
ಅಲ್ಲಿ ಆಕೆಯನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿದ್ದಾನೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಹೊನ್ನಾಳಿ ಪೊಲೀಸರು, ಘಟನೆ ನಡೆದ ಮೂರೇ ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.