
ಬೇವಿನಗಿಡದಲ್ಲಿ ಉಕ್ಕಿದ ಬಿಳಿ ಹಾಲು: ಪವಾಡವೆಂದು ಜನರಿಂದ ನಿತ್ಯ ಪೂಜೆ
Monday, January 10, 2022
ಹನುಮಸಾಗರ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಠರಟಾಣ ಗ್ರಾಪಂ ವ್ಯಾಪ್ತಿಯ ಪೂರ್ತಗೇರಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೇವಿನ ಮರದಲ್ಲಿ ಬಿಳಿ ಹಾಲು ಜಿನುಗಲು ಆರಂಭಿಸಿದ್ದು, ಹಳ್ಳಿಯ ಜನತೆ ಇದನ್ನು ಪವಾಡವೆಂದೇ ನಂಬುತ್ತಿದ್ದಾರೆ. ಇದೀಗ ಇಲ್ಲಿನ ಜನರು 'ಜನಮರುಳೋ ಜಾತ್ರೆ ಮರುಳೋ' ಎಂಬಂತೆ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.
ಕಳೆದ 15 ದಿನಗಳಿಂದ ನಿರಂತರವಾಗಿ ರೈತ ನಿಂಗಪ್ಪ ವಜ್ಜಲ ಎಂಬವರ ಜಮೀನಿನಲ್ಲಿರುವ ಬೇವಿನ ಮರದಿಂದ ಹಾಲಿನಂತಹ ನೊರೆ ಉಕ್ಕಿ ಬರುತ್ತಿದೆ. ಈ ನೊರೆ ಮೊದಲು ಮರದ ಮೇಲ್ಭಾಗದಿಂದ ಸುರಿಯುತ್ತಿತ್ತು. ಬಳಿಕ ಕ್ರಮೇಣ ಮರದ ಮಧ್ಯಭಾಗದಿಂದ ಹಾಲು ಸುರಿಯಲು ಆರಂಭಿಸಿದೆ. ಇದರಿಂದ ಆತಂಕಗೊಂಉ ಸ್ಥಳೀಯ ಸ್ವಾಮೀಜಿಯವರನ್ನು ಕರೆ ತಂದು ತೊರಿಸಿದಾಗ ಅವರು ಇದು ದೇವರ ಪವಾಡವಾಗಿದ್ದು, ನೀವು ಪ್ರತಿ ದಿನವಲ್ಲದಿದ್ದರೂ ಕೊನೆಯ ಪಕ್ಷ ಪ್ರತಿ ಶುಕ್ರವಾರಕ್ಕೊಮ್ಮೆ ವಿಶೇಷ ಪೂಜೆ ಸಲ್ಲಿಸಲು ತಿಳಿಸಿದ್ದಾರೆ. ಈ ವಿಶೇಷ ಪೂಜೆಯಿಂದ ನಮಗೆ ಯಾವುದೇ ಕೇಡು ಆಗದೇ ನಮ್ಮ ಇಷ್ಟಾರ್ಥ ನೇರವೇರಲಿ ಪ್ರಾರ್ಥಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವೂ ಗಿಡಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದೇವೆ.
ಕೆಲವರು ಬೇವಿನ ಮರದಿಂದ ಬೀಳುವ ಹಾಲಿನ ನೊರೆಯನ್ನು ಬಾಟಲಿಯಲ್ಲಿ ಪ್ರಸಾದದಂತೆ ತುಂಬಿಸಿಕೊಂಡು ಹೋಗುತ್ತಾರೆ. ಈ ಬಗ್ಗೆ ಕೇಳಿದಾಗ ಔಷಧಿಗೆ ಬೇಕೆಂದು ಎಂದು ಹೇಳುತ್ತಿರುವುದು ನಮಗೆ ಮತ್ತಷ್ಟು ಭಯ ಮೂಡಿಸಿದೆ ಎನ್ನುತ್ತಾರೆ ರೈತ ನಿಂಗಪ್ಪ ವಜ್ಜಲ.
ಈ ಬಗ್ಗೆ ಕುಷ್ಟಗಿ ಉಪ ವಲಯ ಅರಣ್ಯಾಧಿಕಾರಿ ಶಿವಶಂಕರ ರ‍್ಯಾವಣಿಕಿ ಮಾತನಾಡಿ, ಬೇವಿನ ಮರದಲ್ಲಿ ರಾಸಾಯನಿಕ ಕ್ರಿಯೆಯಿಂದ ಗಿಡಗಳಿಗೆ ಗಾಯವಾದಾಗ ಬಿಳಿ ದ್ರವ ಸುರಿಯೋದು ಸಹಜ. ಆದರೆ ಜನರು ಮಾತ್ರ ಇದನ್ನು ತಿಳಿಯದೆ ದೇವರು ಮುನಿಸಿಕೊಂಡಿದ್ದನೆ ಎಂದು ನಂಬಿ ಗಿಡಗಳಿಗೆ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿರುವುದು ವಿಪರ್ಯಾಸ. ಈ ಬಗ್ಗೆ ಹೊಲಕ್ಕೆ ಭೇಟಿ ನೀಡಿ ರೈತನಿಗೆ ತಿಳಿ ಹೇಳಿಸುತ್ತೇನೆ ಎಂದು ಹೇಳಿದ್ದಾರೆ.