
ನಟಿ ನೀತೂ ಶೆಟ್ಟಿ ಮತ್ತೆ ಬಣ್ಣ ಹಚ್ಚಿದ್ದಾರೆ: ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ’ಯಲ್ಲಿ ಭಿನ್ನ ಮಾದರಿಯಲ್ಲಿ ಕಾಣಿಸಿಕೊಂಡ ನಟಿ
Sunday, January 30, 2022
ಉಡುಪಿ: ನಟಿ ನೀತೂ ಶೆಟ್ಟಿ ಮತ್ತೆ ಬಣ್ಣ ಹಚ್ಚಿದ್ದಾರೆ. ಇದೀಗ ಅವರು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ’ಯಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ನೀವು ನಟ-ನಿರ್ದೇಶಕ ರಿಷಬ್ ಶೆಟ್ಟಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು; ಕೊಡುಗೆ ರಾಮಣ್ಣ ರೈ’ ಸಿನಿಮಾದ ಎರಡನೇ ಭಾಗ ಮಾಡುತ್ತಿದ್ದಾರೆ, ಅದರಲ್ಲಿ ನೀತೂ ಅಭಿನಯಿಸಲಿದ್ದಾರೆ ಅಂದುಕೊಂಡರೆ ಅದು ತಪ್ಪು. ಏಕೆಂದರೆ ನಟಿ ನೀತೂ ಶೆಟ್ಟಿಯವರು ಬಣ್ಣ ಹಚ್ಚಿದ್ದು ಶಾಲೆಗಾಗಿ. ‘ಕನ್ನಡ ಮನಸ್ಸುಗಳ ಪ್ರತಿಷ್ಠಾನ’ ಹಮ್ಮಿಕೊಂಡಿರುವ ‘ಸರಕಾರಿ ಶಾಲೆ ಉಳಿಸಿ ಅಭಿಯಾನ’ದಲ್ಲಿ ನೀತೂ ಶೆಟ್ಟಿ ಕೂಡ ಭಾಗಿಯಾಗಿದ್ದಾರೆ.
ಈ ಪ್ರತಿಷ್ಠಾನದ ಮೂಲಕ ಈಗಾಗಲೇ 10 ಶಾಲೆಗಳ ಗೋಡೆಗಳಿಗೆ ಬಣ್ಣ ಹಚ್ಚಿ ಆಕರ್ಷಕಗೊಳಿಸುವ, ಉತ್ತಮ ಪಡಿಸುವ ಕಾರ್ಯ ಮಾಡಿದೆ. ಇದೀಗ 11ನೇ ಶಾಲೆಯಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇದೀಗ 60ಕ್ಕೂ ಅಧಿಕ ಸ್ವಯಂಸೇವಕರು ಬೆಳಗ್ಗೆ 7 ಗಂಟೆಯಿಂದ ಕೆಲಸ ಮಾಡಿ ಈ ಶಾಲೆಗೆ ಬಣ್ಣ ಹಚ್ಚಿ ಚಂದವಾಗಿಸಿದ್ದಾರೆ. ಅವರಲ್ಲಿ ಒಬ್ಬರಾಗಿ ನಟಿ ನೀತೂ ಶೆಟ್ಟಿ ಕೂಡ ಅಳಿಲು ಸೇವೆ ಮಾಡಿದ್ದು, ಆ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲೂ ಅವರು ಹಂಚಿಕೊಂಡಿದ್ದಾರೆ.