
ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿರುವುದನ್ನು ಬಹಿರಂಗಪಡಿಸಿದ ನಿಕ್ - ಪಿಗ್ಗಿ ದಂಪತಿ
Sunday, January 23, 2022
ನವದೆಹಲಿ: ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ನಿಕ್ ಹಾಗೂ ಪಿಗ್ಗಿ ತಮ್ಮ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಹಾಗೂ ಫಾಲೋವರ್ಸ್ಗೆ ಈ ವಿಚಾರವನ್ನು ತಿಳಿಸಿದ್ದಾರೆ. "ನಾವು ಬಾಡಿಗೆ ತಾಯ್ತದಲ್ಲಿ ಮಗುವನ್ನು ಪಡೆದಿರುವ ವಿಚಾರ ತಿಳಿಸಲು ನಮಗೆ ಅತೀವ ಸಂತೋಷವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಮ್ಮ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸದೆ ನಮ್ಮ ಗೌಪ್ಯತೆ ಕಾಪಾಡುವಂತೆ ಗೌರವದಿಂದ ಕೇಳಿಕೊಳ್ಳುತ್ತೇವೆ. ನಿಮಗೆಲ್ಲರಿಗೂ ಧನ್ಯವಾದಗಳು" ಎಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಪ್ರಿಯಾಂಕಾ ತಿಳಿಸಿದ್ದಾರೆ.
ಅದೇ ರೀತಿ ನಿಕ್ ಕೂಡ ಇದೇ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ನಿಕ್ ಜೋನಸ್ ಅವರು ಪ್ರಿಯಾಂಕಾರಿಗಿಂತಲೂ 11 ವರ್ಷ ಕಿರಿಯರು. ಇದೇ ವಿಚಾರಕ್ಕೆ ಅವರ ಮದುವೆ ಸಂದರ್ಭ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು.
ಆದರೆ, ಅದಾವ ಟೀಕೆಗೂ ತಲೆಕೆಡಿಸಿಕೊಳ್ಳದ ಪಿಗ್ಗಿ, 2018ರ ಡಿಸೆಂಬರ್ 1ರಂದು ಅಮೆರಿಕ ಪಾಪ್ ಗಾಯಕ ನಿಕ್ ಜೋನಾಸ್ರನ್ನು ಮದುವೆ ಆಗುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿದ್ದರು. ಅಲ್ಲದೆ, ಇಬ್ಬರು ಅನೋನ್ಯವಾಗಿ ಜೀವನ ಸಹ ಸಾಗಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡುತ್ತಾ ಬಂದಿದ್ದಾರೆ.