
ಆನ್ಲೈನ್ ತರಗತಿ ಮಧ್ಯೆಯೇ ಕಾಣಿಸಿಕೊಂಡಿದೆ ಅರೆಬೆತ್ತಲೆ ನೃತ್ಯ: ದಂಗಾದ ಶಿಕ್ಷಕರು ವಿದ್ಯಾರ್ಥಿಗಳು
Wednesday, January 26, 2022
ಕಾಞಂಗಾಡ್(ಕೇರಳ): ಮೂರನೇ ಅಲೆಯ ಕೋವಿಡ್ ಬಳಿಕ ಆನ್‌ಲೈನ್ ತರಗತಿಗಳು ಮತ್ತೆ ಹಲವೆಡೆ ಆರಂಭವಾಗಿದೆ. ಇದರ ಬೆನ್ನಲ್ಲೇ ಅಸಂಬದ್ಧ ವೀಡಿಯೋಗಳು ಹರಿದಾಡುವುದು ಶುರುವಾಗಿದೆ.
ನಕಲಿ ಐಪಿ ವಿಳಾಸ ಬಳಸಿಕೊಂಡು ದುಷ್ಕರ್ಮಿಗಳು ವೀಡಿಯೋಗಳನ್ನು ಹರಿಯಬಿಡುತ್ತಿದ್ದಾರೆ. ಅಂಥದ್ದೇ ಒಂದು ಅಶ್ಲೀಲ ವೀಡಿಯೋ ಕೇರಳದ ಕಾಞಂಗಾಡ್ ನಲ್ಲಿ ನಡೆದಿದೆ. ಇಲ್ಲಿಯ ಶಾಲೆಯೊಂದರ ಆನ್‌ಲೈನ್ ಕ್ಲಾಸ್ ನಡೆಯುತ್ತಿತ್ತು. ಈ ವೇಳೆ ಯಾರೋ ವ್ಯಕ್ತಿಯೊಬ್ಬ ಮುಖ ಮುಚ್ಚಿಕೊಂಡು, ಅರೆಬೆತ್ತಲೆಯಾಗಿ ಡಾನ್ಸ್ ಮಾಡಿದ್ದಾನೆ. ಅದು ಆನ್‌ಲೈನ್‌ಲ್ಲಿ ಇರುವ ಮಕ್ಕಳಿಗೆ ಕಾಣಿಸಿದೆ. ಮಕ್ಕಳು ಹಾಗೂ ಶಿಕ್ಷಕರು ಅರೆಕ್ಷಣ ಇದನ್ನು ನೋಡಿ ದಂಗಾಗಿದ್ದಾರೆ.
ತಕ್ಷಣ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಆಗುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿಯವರಿಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆಯ ಪ್ರಾದೇಶಿಕ ಉಪನಿರ್ದೇಶಕರು ಶಾಲೆಗೆ ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಶಾಲೆಯ ಯಾವುದೇ ವಿದ್ಯಾರ್ಥಿ ಐಪಿ ಅಡ್ರೆಸ್ ದುರುಪಯೋಗ ಪಡಿಸಿಕೊಂಡಿಲ್ಲ ಎಂದಿದ್ದಾರೆ. ಇದುವರೆಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.