
ಪಾರ್ಕ್ ನಲ್ಲಿದ್ದ ಜೋಡಿಗೆ ಮಾಸ್ಕ್ ಧರಿಸಿರೆಂದು ಪೊಲೀಸ್ ಹೇಳಿದ್ದೇ ತಪ್ಪಾಯ್ತು: ಕನ್ನೆಗೆ ಬಾರಿಸಿದ ಮಹಿಳೆ, ಫೈರ್ ಮಾಡಿದ ವಕೀಲ
Thursday, January 13, 2022
ನವದೆಹಲಿ: ಪಾರ್ಕಿನಲ್ಲಿದ್ದ ಜೋಡಿಯೊಂದಕ್ಕೆ ಮಾಸ್ಕ್ ಧರಿಸಿ ಎಂದು ಪೊಲೀಸೋರ್ವರು ಹೇಳಿದ್ದರಿಂದ ಸಿಡಿಮಿಡಿಗೊಂಡ ಜೋಡಿ ಭಯಾನಕ ಕೃತ್ಯವೊಂದನ್ನು ಎಸಗಿದೆ. ಈ ಜೋಡಿಯಲ್ಲಿ ಮಹಿಳೆ ಪೊಲೀಸ್ ಕೆನ್ನೆಗೆ ಬಾರಿಸಿದರೆ, ಪುರುಷ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ.
ದೆಹಲಿಯ ಶಹದಾರ ಜಿಲ್ಲೆಯ ಸೀಮಾಪುರಿಯ ದಿಲ್‌ಶಾದ್ ಗಾರ್ಡನ್ ಬಳಿ ಭಾನುವಾರ ಬೆಳಗ್ಗೆ ಇಂಥದ್ದೊಂದು ಭಯಾನಕ ಘಟನೆ ನಡೆದಿದೆ. ಈ ಜೋಡಿ ಪಾರ್ಕ್‌ನಲ್ಲಿ ಕುಳಿತಿತ್ತು. ಅಲ್ಲಿಗೆ ಗಸ್ತು ತಿರುಗುತ್ತ ಬಂದ ಪೊಲೀಸೊಬ್ಬರು ಈ ಜೋಡಿಯನ್ನು ನೋಡಿದ್ದಾರೆ. ಇಬ್ಬರೂ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಪೊಲೀಸನೊಂದಿಗೆ ಖ್ಯಾತೆ ತೆಗೆದು ಕೆನ್ನೆಗೆ ಹೊಡೆದಿದ್ದಾಳೆ. ಇಷ್ಟಲ್ಲದೆ ಪುರುಷ ಜೇಬಿನಲ್ಲಿದ್ದ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಪೊಲೀಸ್‌ಗೆ ಗುಂಡು ತಾಗಲಿಲ್ಲ.
ತಕ್ಷಣ ಅಲ್ಲಿಗೆ ಪೊಲೀಸ್ ತಂಡ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಪೂರ್ವ ದೆಹಲಿಯ ಪಟ್ಪರ್‌ಗಂಜ್ ಗ್ರಾಮದ ನಿವಾಸಿಗಳಾಗಿದ್ದರು. ಆರೋಪಿಯು ವೃತ್ತಿಯಲ್ಲಿ ವಕೀಲನಾಗಿದ್ದು ನಂದ ನಗರಿಯಲ್ಲಿ ಬಾಲಾಪರಾಧಿ ನ್ಯಾಯ ಮಂಡಳಿಯ ಕಲ್ಯಾಣಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.