
ಆಸ್ತಿ ನೀಡಿಲ್ಲವೆಂದು ಕೋಪಗೊಂಡ ರೇಷ್ಮೆಗೂಡಿಗೆ ವಿಷವಿಕ್ಕಿದ ಪುತ್ರಿ: ವೃದ್ಧ ದಂಪತಿಯ ಅಳಲು
Saturday, January 29, 2022
ಕೋಲಾರ: ಆಸ್ತಿ ನೀಡಿಲ್ಲವೆಂದು ಎಂದು ಸ್ವಂತ ಪುತ್ರಿಯೇ ಪತಿ - ಪುತ್ರನೊಂದಿಗೆ ಸೇರಿಕೊಂಡು ಹೆತ್ತವರಿಗೆ ಸೇರಿದ ರೇಷ್ಮೆಗೂಡಿನ ಮನೆಯಲ್ಲಿದ್ದ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿ ಹುಳುಗಳನ್ನು ಸಾಯಿಸಿದ್ದಾಳೆಂಬ ಆರೋಪ ಕೇಳಿ ಬಂದಿದೆ. ಇಂತಹ ಅಮಾನವೀಯ ಘಟನೆಯೊಂದು ಕೋಲಾರ ತಾಲೂಕಿನ ಯಳಚೀಪುರದಲ್ಲಿ ನಡೆದಿದೆ.
ಯಳಚೀಪುರದ ಗ್ರಾಮದ ವಯೋವೃದ್ಧರಾದ ರಾಮಣ್ಣ ಹಾಗೂ ಲಕ್ಷ್ಮಮ್ಮ ದಂಪತಿ ಜೀವನೋಪಾಯಕ್ಕಾಗಿ ರೇಷ್ಮೆ ಬೆಳೆಯುತ್ತಿದ್ದರು. ಇವರು ರೇಷ್ಮೆ ಹುಳುವಿನ ಮೊಟ್ಟೆ ಉತ್ಪಾದನೆಗಾಗಿ ಹಿಪ್ಪು ನೇರಳೆ ಸೊಪ್ಪು ನೀಡಿ ಹುಳುವನ್ನು ಆರೈಕೆ ಮಾಡುತ್ತಿದ್ದರು.
ಆದರೆ ಜಮೀನು ನೀಡುತ್ತಿಲ್ಲವೆಂಬ ಕೋಪದಿಂದ ಮಗಳು ಚೌಡಮ್ಮ, ಅಳಿಯ ಲಕ್ಷ್ಮಣ್ ಹಾಗೂ ಮೊಮ್ಮಗ ಆನಂದ ಸೇರಿ ಮೂವರು ಗುರುವಾರ ರಾತ್ರಿ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿದ್ದಾರೆ. ಇದರಿಂದ ನೂರಾರು ರೇಷ್ಮೆ ಹುಳುಗಳು ಸತ್ತಿದ್ದು, ಸುಮಾರು 1 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ವೃದ್ಧ ದಂಪತಿ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.