
ಮತ್ತೆ ಹೆಣ್ಣು ಹುಟ್ಟಲಿದೆ ಎಂಬ ಆತಂಕದಲ್ಲಿ ತುಂಬು ಗರ್ಭಿಣಿ ಆತ್ಮಹತ್ಯೆ: ಹೊಟ್ಟೆಯಲ್ಲಿದ್ದುದು ಮಾತ್ರ ಗಂಡು ಮಗು!
Friday, January 7, 2022
ಮಂಚೇರಿಯಲ್(ತೆಲಂಗಾಣ): ಹುಟ್ಟುವ ಮಗು ಮತ್ತೆ ಹೆಣ್ಣಾಗಲಿದೆ ಎಂಬ ಆತಂಕದಲ್ಲಿಯೇ 9 ತಿಂಗಳ ತುಂಬು ಗರ್ಭಿಣಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಎನ್ಟಿಆರ್ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 4 ವರ್ಷಗಳ ಹಿಂದೆ ಮಂಚೇರಿಯಲ್ ಪಟ್ಟಣದ ಎನ್ಟಿಆರ್ ನಗರದ ಆನಂದ್ ಎಂಬವರೊಂದಿಗೆ ದಂಡೇಪಲ್ಲಿಯ ರಮ್ಯಾ(25) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ವರ್ಷದಲ್ಲಿಯೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ರಮ್ಯಾ ಮತ್ತೊಮ್ಮೆ ಗರ್ಭಿಣಿಯಾಗಿದ್ದರು. 9 ತಿಂಗಳ ತುಂಬು ಗರ್ಭಿಣಿಯಾಗಿದ್ದ ಅವರಿಗೆ ಜನವರಿ 6ಕ್ಕೆ ಹೆರಿಗೆ ದಿನಾಂಕ ನಿಗದಿಪಡಿಸಲಾಗಿತ್ತು.
ಮೊದಲ ಮಗು ಹೆಣ್ಣಾಗಿದ್ದರಿಂದ ರಮ್ಯಾ ಇದೀಗ ಮತ್ತೊಮ್ಮೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಭಯದಲ್ಲಿದ್ದರಂತೆ. ಇದರ ಜೊತೆಗೆ, ಹೆಣ್ಣು ಮಗು ಹುಟ್ಟಿದರೆ ಪತಿಯ ಮನೆಯವರಿಂದ ಕಿರುಕುಳ ಅನುಭವಿಸಬೇಕೆಂಬ ಭಯ, ಆತಂಕದಲ್ಲಿ ಹೆರಿಗೆ ಆಗುವುದಕ್ಕೂ ಒಂದು ದಿನ ಮುನ್ನವೇ ಆಕೆ ಆತ್ಮಹತ್ಯೆ ಮಾಡಿ ಇಹಲೋಕ ತ್ಯಜಿಸಿದ್ದಾಳೆ.
ರಮ್ಯಾ ಮೃತದೇಹದ ಅಂತ್ಯಕ್ರಿಯೆಗೂ ಮುನ್ನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಗರ್ಭದಲ್ಲಿದ್ದಿದ್ದು ಗಂಡು ಮಗುವೆಂದು ತಿಳಿದು ಬಂದಿದೆ. ಅತ್ತೆ ಮನೆಯವರ ಮಾನಸಿಕ, ದೈಹಿಕ ಕಿರುಕುಳದಿಂದಲೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.