
ವಿವಾಹವಾಗುವುದಾಗಿ ನಟಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ: ನಿರ್ಮಾಪಕ ಅರೆಸ್ಟ್
Sunday, January 30, 2022
ಬೆಂಗಳೂರು: ಸ್ಯಾಂಡಲ್ ವುಡ್ ನ ಪೋಷಕ ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆಗೈದ ಆರೋಪದಲ್ಲಿ ನಿರ್ಮಾಪಕನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ ನಿವಾಸಿ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್ (42) ಬಂಧಿತ ಆರೋಪಿ.
ನಿರ್ಮಾಪಕ ಹರ್ಷವರ್ಧನ್ ವಿರುದ್ಧ 41 ವರ್ಷದ ಪೋಷಕ ನಟಿ ನೀಡಿರುವ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನ ಹತ್ತಾರು ಸಿನಿಮಾಗಳು ಹಾಗೂ ಧಾರವಾಹಿಗಳಲ್ಲಿ ನಟಿಸುತ್ತಿರುವ 41 ವರ್ಷದ ನಟಿಗೆ ಆರೋಪಿ ವಂಚಿಸಿದ್ದಾನೆ ಎನ್ನಲಾಗಿದೆ.
ಎರಡು ವರ್ಷಗಳಿಂದ ಈತ ವಿವಾಹವಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೀಗ ಮದುವೆಯಾಗುವಂತೆ ಕೇಳಿದರೆ ಆತ ಅವಾಚ್ಯವಾಗಿ ನಿಂದಿಸಿ ನಿಂದಿಸಿದ್ದಾನೆ. ಅಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ವಂಚನೆ ಕುರಿತು ಸಂತ್ರಸ್ತೆ ಜ.27ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿರುವ ಆರೋಪದಡಿ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.