
ಅಮಲು ಪದಾರ್ಥ ನೀಡಿ ವಿಶೇಷ ಚೇತನ ಮಹಿಳೆಯ ಮೇಲೆ ಕಾಮುಕರಿಬ್ಬರಿಂದ ಅತ್ಯಾಚಾರ!
Tuesday, January 4, 2022
ದಾವಣಗೆರೆ: ಕಾಮುಕರಿಬ್ಬರು ವಿಶೇಷ ಚೇತನ ವಿವಾಹಿತ ಯುವತಿಯೋರ್ವಳಿಗೆ ಅಮಲು ಪದಾರ್ಥ ನೀಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ದಾವಣಗೆರೆ ತಾಲೂಕಿನ ಮ್ಯಾಸರಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮ್ಯಾಸರಹಳ್ಳಿಯ ಪ್ರಭು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಕುಂದುವಾಡದ ಕಿರಣ್ ತಲೆ ಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ತೊಗರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವತಿಗೆ ಅಮಲು ಪದಾರ್ಥ ನೀಡಿರುವ ಕಾಮುಕರು, ಆಕೆ ಅರೆಪ್ರಜ್ಞಾವಸ್ಥೆ ತಲುಪುತ್ತಿದ್ದಂತೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತೆ ತೊಗರಿ ಹೊಲದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ಸ್ಥಳೀಯರು ಆಕೆಯ ಸ್ಥಿತಿಯನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.