
ದೆಹಲಿ: ಯುವತಿಯ ಸಾಮೂಹಿಕ ಅತ್ಯಾಚಾರ, ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ
Thursday, January 27, 2022
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 20 ವರ್ಷದ ಯುವತಿಯನ್ನು ಸಾಮೂಹಿಕ ಅತ್ಯಾಚಾರವೆಸಗಿ, ಚಪ್ಪಲಿಗಳ ಹಾರ ಹಾಕಿ ಆಕೆಯ ಮುಖಕ್ಕೆ ಮಸಿ ಬಳಿದು, ತಲೆ ಬೋಳಿಸಿ ಮೆರವಣಿಗೆ ಮಾಡಲಾಗಿರುವ ಹೇಯ ಕೃತ್ಯವೊಂದು ನಡೆದಿದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಗುರುವಾರ ಬೆಳಗ್ಗೆ ಹೇಳಿದ್ದಾರೆ.
ಕಸ್ತೂರ್ಬಾ ನಗರದಲ್ಲಿ ಅಕ್ರಮ ಮದ್ಯ ಮಾರಾಟಗಾರರು ಈ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯ ತಲೆಯನ್ನು ಬೋಳಿಸಿ, ಚಪ್ಪಲಿ ಹಾರ ಹಾಕಿ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಬಗ್ಗೆ ತಾನು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡುತ್ತಿದ್ದೇನೆ. ಕೃತ್ಯದಲ್ಲಿ ಪಾಲ್ಗೊಂಡಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅಪರಾಧಿಗಳನ್ನು ಬಂಧಿಸಬೇಕು. ಅಲ್ಲದೆ ಸಂತ್ರಸ್ತೆ ಮತ್ತು ಅವಳ ಕುಟುಂಬಕ್ಕೆ ಭದ್ರತೆ ನೀಡಬೇಕೆಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
"ಇದು ಭಾರೀ ನಾಚಿಕೆಗೇಡಿನ ಕೃತ್ಯವಾಗಿದ್ದು, ಅಪರಾಧಿಗಳಿಗೆ ಇಷ್ಟೊಂದು ಧೈರ್ಯ ಬಂದಿದ್ದು ಹೇಗೆ? ಕೇಂದ್ರ ಗೃಹ ಸಚಿವರು ಮತ್ತು ಲೆಫ್ಟಿನೆಂಟ್ ಗವರ್ನರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಗಮನ ಹರಿಸಬೇಕು. ದೆಹಲಿಗರು ಇಂತಹ ಘೋರ ಅಪರಾಧ ಮತ್ತು ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಸಿಎಂ ಕೇಜ್ರಿವಾಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕಳವಳಕಾರಿ ಘಟನೆಯ ವೀಡಿಯೋವನ್ನು ಆರೋಪಿಗಳು ಚಿತ್ರೀಕರಿಸಿದ್ದು, ಅದು ವೈರಲ್ ಆಗಿದೆ. ಹಲವಾರು ಮಹಿಳೆಯರೂ ಯುವತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಅಮಾನವೀಯವಾಗಿ ಥಳಿಸುವುದನ್ನು ಕಾಣಬಹುದಾಗಿದೆ.