
ವಿಶೇಷ ಚೇತನೆಯ ಮೇಲೆ ಸಹಾಯಕ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರಿಂದಲೇ ಅತ್ಯಾಚಾರ: ಅಪರಾಧ ಸಾಬೀತು
Saturday, January 29, 2022
ತುಮಕೂರು: ವಿಶೇಷ ಚೇತನೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಉಮೇಶಯ್ಯ ಎಂಬಾತನ ವಿರುದ್ಧದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಮಹಿಳಾ ಠಾಣೆ ಎಎಸ್ಐ ಆಗಿದ್ದ ಉಮೇಶಯ್ಯ, 2017ರ ಜ.15ರಂದು ನೈಟ್ ರೌಂಡ್ಸ್ನಲ್ಲಿದ್ದ. ಈ ಸಂದರ್ಭ ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತ್ತಿದ್ದ ವಿಶೇಷ ಚೇತನ ಯುವತಿಯನ್ನು ಖಾಸಗಿ ಜೀಪ್ನಲ್ಲಿ ಕೂರಿಸಿಕೊಂಡು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಸಂತ್ರಸ್ತ ಯುವತಿಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದು, ಉಮೇಶಯ್ಯನ ಕೃತ್ಯದಿಂದ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಉಮೇಶಯ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿತ್ತು.
ಈ ಪ್ರಕರಣವು ಜಿಲ್ಲಾ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಆರೋಪಿಯ ಮೇಲಿನ ಸಾಬೀತಾಗಿದ್ದು ಉಮೇಶಯ್ಯ ತಪ್ಪಿತಸ್ಥನೆಂದು ಜ.28ರಂದು ತೀರ್ಪು ನೀಡಿದ್ದಾರೆ. ಜ.31ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ. ಪ್ರಕರಣದ ಎರಡನೇ ಆರೋಪಿ ಖಾಸಗಿ ವಾಹನ ಚಾಲಕ ಈಶ್ವರನನ್ನು ನ್ಯಾಯಾಲಯವು ಆರೋಪ ಮುಕ್ತಗೊಳಿಸಿದೆ. ಸರ್ಕಾರಿ ಅಭಿಯೋಜಕಿ ವಿ.ಎ. ಕವಿತಾ ವಾದ ಮಂಡಿಸಿದ್ದರು.