
ಐದು ವರ್ಷದ ಬಾಲಕಿಯ ಮೇಲೆ ಮಲ ತಂದೆಯಿಂದ ಅತ್ಯಾಚಾರ: ಆರೋಪಿ ಅಂದರ್
Thursday, January 6, 2022
ಚಾಮರಾಜನಗರ: ಐದು ವರ್ಷದ ಪುತ್ರಿಯ ಮೇಲೆ ಮಲತಂದೆಯೇ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಚಾಮರಾಜನಗರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯ ವಿರುದ್ಧ ಆತನ ಪತ್ನಿಯೇ ದೂರು ದಾಖಲಿಸಿದ್ದಾರೆ. ಕೃತ್ಯ ಎಸಗಿರುವ ಆರೋಪಿ ಅಪ್ರಾಪ್ತ ಬಾಲಕಿ ತಾಯಿಯ ಎರಡನೇ ಪತಿಯಾಗಿದ್ದಾನೆ.
ಬಾಲಕಿಯ ತಾಯಿ ಮೊದಲ ಪತಿಯ ಕಿರುಕುಳ ಸಹಿಸಲಾಗದೆ ಆತನಿಂದ ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದಳು. ಆ ಬಳಿಕ ಆಕೆ ಈತನೊಂದಿಗೆ ಮರು ವಿವಾಹವಾಗಿದ್ದಳು. ಆಕೆಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾಳೆ.
ಆರೋಪಿ ಮೂಲತಃ ಮೈಸೂರಿನವನಾಗಿದ್ದು, ಪ್ರತೀ ದಿನ ಮದ್ಯಸೇವನೆ ಮಾಡಿ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಈತನ ಕಿರುಕುಳ ಸಹಿಸಲಾಗದೆ ಮಹಿಳೆ ತವರು ಮನೆಗೆ ಬಂದಿದ್ದಳು. ಆ ಬಳಿಕ ಪತಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರನ್ನೂ ನೀಡಿದ್ದಳು.
ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆ ಬಳಿಕ ಇಬ್ಬರೂ ಮಕ್ಕಳೊಂದಿಗೆ ನಗರದಲ್ಲಿಯೇ ಮನೆಮಾಡಿಕೊಂಡು ವಾಸಿಸುತ್ತಿದ್ದರು. ಇದೀಗ ಆರೋಪಿಯು ಪತ್ನಿ ಮನೆಯಿಂದ ಹೊರಗೆ ಹೋಗಿರುವುದನ್ನು ಗಮನಿಸಿ ಐದು ವರ್ಷದ ಮಲ ಪುತ್ರಿಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ತಾಯಿ ಮನೆಗೆ ಬಂದಾಗ ಮಗು ಅಳುತ್ತಿತ್ತು. ಮಗುವನ್ನು ವಿಚಾರಿಸಿದಾಗ ಮಲತಂದೆ ಎಸಗಿರುವ ಕೃತ್ಯವನ್ನು ವಿವರಿಸಿದೆ.
ತಕ್ಷಣ ಆಕೆ ಪಟ್ಟಣ ಠಾಣೆಗೆ ಪತಿಯ ವಿರುದ್ಧ ದೂರು ಸಲ್ಲಿಸಿದ್ದಾಳೆ. ಪಟ್ಟಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಹದೇವಶೆಟ್ಟಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.