
ಪತ್ನಿಯ ಸಹಮತವಿಲ್ಲದ ದೈಹಿಕ ಸಂಪರ್ಕ ಅತ್ಯಾಚಾರ ಎಂದು ಪರಿಗಣಿಸಿದಲ್ಲಿ ಕಾನೂನು ವ್ಯವಸ್ಥೆ ದುರುಪಯೋಗವಾಗಲಿದೆ: ಕೇಂದ್ರ ಸರಕಾರ ಆತಂಕ
Sunday, January 30, 2022
ನವದೆಹಲಿ: ವಿವಾಹವಾಗಿದ್ದರೂ ಪತ್ನಿಯ ಸಹಮತವಿಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದ್ದಲ್ಲಿ ಕಾನೂನು ವ್ಯವಸ್ಥೆ ದುರುಪಯೋಗವಾಗಬಹುದು. ಹೀಗೆಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದೆ.
ಒಂದು ವೇಳೆ, ಪತ್ನಿಯ ಸಹಮತವುಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ, ದೂರುಗಳ ಪ್ರವಾಹವೇ ಹರಿದು ಬರಬಹುದು ಎಂದೂ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯು ಜ.12ರಿಂದ ನಡೆಯುತ್ತಿದೆ. ಶುಕ್ರವಾರ ನಡೆದಿರುವ ವಾದ ಮಂಡನೆಯ ವೇಳೆ, ಕೇಂದ್ರ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 'ಪಾಶ್ಚಿಮಾತ್ಯ ದೇಶಗಳಲ್ಲಿರುವ ಶಿಕ್ಷೆಯ ವ್ಯವಸ್ಥೆಯನ್ನು ಅದೇ ಮಾದರಿಯಲ್ಲಿ ಭಾರತದಲ್ಲಿಯೂ ಜಾರಿಗೆ ತಂದರೆ ಪ್ರತಿಕೂಲ ಪರಿಣಾಮ ಉಂಟಾದೀತು ಎಂದಿದ್ದಾರೆ.
ಭಾರತೀಯ ದಂಡ ಸಹಿತೆಯ 498ರಲ್ಲಿ ಉಲ್ಲೇಖಗೊಂಡಿರುವ ವರದಕ್ಷಿಣೆಯನ್ನು ವಿರೋಧಿಸಿ ಇರುವ ಅಂಶಗಳು ದುರುಪಯೋಗವಾಗುತ್ತಿರುವ ಬಗ್ಗೆಯೂ ತುಷಾರ್ ಮೆಹ್ತಾ ಪ್ರಸ್ತಾಪಿಸಿದ್ದಾರೆ.