
ಶೌಚಗೃಹದ ಬಾಗಿಲು ತೆಗೆದ ಮನೆಯೊಡತಿಗೆ ಶಾಕ್: ಬುಸ್ ಎಂದ ನಾಗರಹಾವು!
Wednesday, January 5, 2022
ಶಿವಮೊಗ್ಗ: ಹಾವನ್ನು ಕಂಡರೆ ಬೆದರಿ ಓಡುವವರೇ ಅಧಿಕ ಮಂದಿ. ಇನ್ನು ಮನೆಯೊಳಗಡೆ ಹಾವೊಂದು ಹೆಡೆಯೆತ್ತಿ ಬುಸ್ ಬುಸ್ ಅಂದರೆ ಹೇಗಾಗಬೇಡ. ಇಂತಹ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯ ಸಂಭವಿಸಿದೆ.
ಮನೆಯೊಂದರ ಶೌಚಗೃಹದೊಳಗಡೆ ಸೇರಿಕೊಂಡು ನಾಗರಹಾವೊಂದು ಮನೆಯವರನ್ನೆಲ್ಲಾ ಬೆಚ್ಚಿಬೀಳುವಂತೆ ಮಾಡಿದೆ. ಕೊನೆಗೆ ಆ ಮನೆಯೊಡತಿ ಆರತಿ ಬೆಳಗಿ ಪೂಜೆಯನ್ನೂ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಮನೆಯೊಡತಿ ಶಬರಿಯವರು ಶೌಚಗೃಹಕ್ಕೆ ಹೋಗಿ ಬಾಗಿಲು ತೆಗೆಯುತ್ತಿದ್ದಂತೆ ಟಾಯ್ಲೆಟ್ನ ಪಿಟ್ನೊಳಗಡೆಯಿಂದ ನಾಗರಹಾವೊಂದು ಬುಸ್ ಅಂತ ಎಡೆ ಎತ್ತಿದೆ. ಹಾವನ್ನು ನೋಡುತ್ತಿದ್ದಂತೆ ಭೀತಿಗೊಳಗಾದ ಶಬರಿ ಹೊರ ಓಡಿದ್ದಾರೆ.
ಸುಮಾರು 4 ಅಡಿ ಉದ್ದದ ನಾಗರಹಾವು ಟಾಯ್ಲೆಟ್ ಫಿಟ್ನ ನೀರಿನ ಪೈಪ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್, ನಾಗರಹಾವನ್ನು ಸುರಕ್ಷಿತವಾಗಿ ಪಿಟ್ನಿಂದ ತೆಗೆದು ಹೊರತೆಗೆದಿದ್ದಾರೆ. ಬಳಿಕ ಆ ಮನೆಯ ಒಡತಿ ನಾಗರಹಾವಿಗೆ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದರು. ನಂತರ ಸ್ನೇಕ್ ಕಿರಣ್ ಅವರು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು.