
ಹಾಸ್ಟೆಲ್ ನಲ್ಲಿ ಇರೋಲ್ಲ, ಕಾಲೇಜಿಗೆ ಹೋಗೋಲ್ಲ ಅಂದ್ರು ಪಾಲಕರು ಬಿಡ್ಲಿಲ್ಲ: ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ
Wednesday, January 5, 2022
ಥೋಟಂಬೆಡು: ಮನೆಯನ್ನು ತೊರೆದು, ಹಾಸ್ಟೆಲ್ನಲ್ಲಿ ಇರಲಾಗದೆ ಅದೇ ರೀತಿ ಓದಿನ ಒತ್ತಡವನ್ನು ಸಹಿಸಲಾಗದೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ತೆಲಗುಗಂಗಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಥೋಟಂಬೆಡು ಮಂಡಲದಲ್ಲಿ ನಡೆದಿದೆ.
ಥೋಟಂಬೆಡು ಮಂಡಲದ ಕರಕೊಲ್ಲು ಮೂಲದ ಚೈತನ್ಯ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಶನಿವಾರ ಶಿವನಾಥಪಾಳ್ಯಂನ ತೆಲುಗುಗಂಗಾ ಕಾಲುವೆಗೆ ಹಾರಿ ಮೃತಪಟ್ಟಿದ್ದು, ಹುಡುಕಾಟ ನಡೆಸಿದ ಬಳಿಕ ಆಕೆಯ ಮೃತದೇಹ ಭಾನುವಾರ ಪತ್ತೆಯಾಗಿದೆ.
ಸಬ್ ಇನ್ಸ್ಪೆಕ್ಟರ್ ರಾಘವೇಂದ್ರರ ಹೇಳಿರುವ ಪ್ರಕಾರ, ಚೈತನ್ಯ ಹಾಸ್ಟೆಲ್ನಲ್ಲಿ ಉಳಿದುಕೊಂಡು ನೆಲ್ಲೂರು ಜಿಲ್ಲೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಆದರೆ ಆಕೆ ತಂದೆಗೆ ಕರೆ ಮಾಡಿ 'ತನಗೆ ಹಾಸ್ಟೆಲ್ನಲ್ಲಿ ಇರಲಾಗುತ್ತಿಲ್ಲ. ಇಲ್ಲಿ ಸಾಕಷ್ಟು ಕೊರತೆ ಇದೆ. ಮನೆಯನ್ನು ತೊರೆದು ದೂರ ಇರಲು ಆಗುತ್ತಿಲ್ಲ. ಹಾಗೆಯೇ ಓದಿನ ಒತ್ತಡವನ್ನು ಸಹಿಸಲಾಗುತ್ತಿಲ್ಲ' ಎಂದು ಅಳಲು ತೋಡಿಕೊಂಡಿದ್ದಳು. ಅದಕ್ಕೆ ತಂದೆ 'ಈಗಾಗಲೇ 50 ಸಾವಿರ ರೂ. ಪಾವತಿಸಿದ್ದೇನೆ. ಈ ವರ್ಷ ಅಲ್ಲಿಯೇ ಉಳಿದುಕೊಂಡು ಓದಿನ ಕಡೆ ಗಮನಹರಿಸು' ಎಂದು ಸಮಾಧಾಮ ಮಾಡಿದ್ದಾರೆ.
ಈ ನಡುವೆ ಶುಕ್ರವಾರ ಚೈತನ್ಯ ಮನೆಗೆ ಮರಳಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲರೂ ಶನಿವಾರ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮನೆಗೆ ಮರಳಿದ್ದಾರೆ. ಈ ವೇಳೆ 'ತಾನು ಕಾಲೇಜಿಗೆ ಹೋಗುವುದಿಲ್ಲ' ಎಂದು ಚೈತನ್ಯ ಹೇಳಿದ್ದಾಳೆ. ಆದರೆ, ಪಾಲಕರು ಆಕೆಯನ್ನು ಗದರಿ, ಈ ವರ್ಷ ಶಿಕ್ಷಣ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಪರಿಣಾಮ ಮನನೊಂದ ಚೈತನ್ಯ ಮನೆಬಿಟ್ಟು ಹೋಗಿ ತನ್ನ ಮೊಬೈಲ್ ಫೋನ್ ಅನ್ನು ಶಿವನಾಥಪಾಳ್ಯಂನಲ್ಲಿರುವ ತೆಲುಗುಗಂಗಾ ಕಾಲುವೆಯ ದಡದಲ್ಲಿ ಇಟ್ಟು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲುವೆ ದಡದಲ್ಲಿ ಮೊಬೈಲ್ ಇರುವುದನ್ನು ನೋಡಿರುವ ವ್ಯಕ್ತಿಯೋರ್ವರು ಆಕೆಯ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಶನಿವಾರ ರಾತ್ರಿ ಚೈತನ್ಯ ಮೃತದೇಹದ ಹುಡುಕಾಟ ನಡೆಸಿದ್ದಾರೆ. ರವಿವಾರ ಬೆಳಗ್ಗೆ ಶಿವನಾಥಪಾಳ್ಯಂ ಬಳಿ ಆಕೆಯ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಗಳನ್ನು ಕಳೆದುಕೊಂಡು ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.