
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಮನೆಯವರಿಗೂ ಜಾಗೃತಿ ಮೂಡಿಸಬೇಕು: ನಳಿನ್ ಕುಮಾರ್ ಕಟೀಲು
Monday, January 3, 2022
ಮಂಗಳೂರು: ವಿದ್ಯಾರ್ಥಿಗಳು ತಾವು ಲಸಿಕೆ ಹಾಕಿಸುವುದಲ್ಲದೆ, ತಮ್ಮ ಮನೆಮಂದಿಗೂ ಜಾಗೃತಿ ಮೂಡಿಸಿ ಆಸ್ಪತ್ರೆಗೆ ಕರೆದೊಯ್ದು ಲಸಿಕೆ ಹಾಕಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ದ.ಕ.ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ನಗರದ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ಇಂದು 25 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮುಂದೆ 1ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಕೋವಿಡ್ ಮೂರನೆ ಅಲೆಯನ್ನು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದ್ದು, ಜನತೆ ಯಾವುದೇ ರೀತಿಯಲ್ಲಿ ಭೀತಿಗೊಳಗಾಗುವ ಅಗತ್ಯವಿಲ್ಲ. ಆದರೆ ಈ ಬಗ್ಗೆ ಮುಂಜಾಗ್ರತೆ ಹಾಗೂ ಎಚ್ಚರಿಕೆ ಅತ್ಯಗತ್ಯ. ಆದ್ದರಿಂದ ವಿದ್ಯಾರ್ಥಿಗಳು ಕೋವಿಡ್ ಸೋಂಕು ಹರಡದಂತೆ ಮಾಸ್ಕ್, ಸಾಮಾಜಿಕ ಅಂತರ ಕಾಯುವ ನಿಟ್ಟಿನಲ್ಲಿ ಮನೆಯವರಿಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ದ.ಕ.ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳು ಇರುವ ಹಿನ್ನೆಲೆಯಲ್ಲಿ ಈ ಗುರಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಮಕ್ಕಳಿಗೆ ಪರಿಣಾಮಕಾರಿಯಾಗುವ ರೀತಿಯಲ್ಲಿ ಎಲ್ಲರಿಗೂ ಕೊವ್ಯಾಕ್ಸಿನ್ ಲಸಿಕೆ ನೀಡಲು ಸರ್ವ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.