
ಕೊಟ್ಟ ಸಾಲ ವಾಪಸ್ ಕೇಳಿರುದ್ದಕ್ಕೆ ಅಕ್ರಮ ಸಂಬಂಧದ ಅಪಪ್ರಚಾರ: ಮಕ್ಕಳಿಬ್ಬರೊಂದಿಗೆ ನಾಲೆಗೆ ಹಾರಿದ ಮಹಿಳೆ
Saturday, January 15, 2022
ಶಿವಮೊಗ್ಗ: ಕೊಟ್ಟ ಸಾಲವನ್ನು ವಾಪಾಸ್ ಕೇಳಿರುವುದಕ್ಕೆ ವೈಯಕ್ತಿಕ ಅಪಪ್ರಚಾರ ಮಾಡಿರುವುದಕ್ಕೆ ಮನನೊಂದ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ವೀಣಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ವೀಣಾ ಹಾಗೂ ಸಂತೋಷ್ ದಂಪತಿಯು ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ್ ಹಾಗೂ ಆಶಾ ಎಂಬುವರಿಗೆ 8 ಲಕ್ಷ ರೂ. ಸಾಲ ನೀಡಿದ್ದರು. ಬಳಿಕ ದಂಪತಿ ಆ ಸಾಲವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಇದರಿಂದ ಆಶಾ ಹಾಗೂ ಸಂತೋಷ್ ಇಬ್ಬರೂ ವೀಣಾ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅಪಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ.
ಸುಖಾ ಸುಮ್ಮನೆ ಹಾಗೆ ಅಪಪ್ರಚಾರ ಮಾಡಬಾರದೆಂದು ಹೇಳಿದರೂ ಕೇಳದೆ ಅದನ್ನೇ ಮುಂದುವರೆಸಿದ್ದಾರೆ. ಇದರಿಂದ ಮನನೊಂದ ವೀಣಾ 7 ವರ್ಷದ ಹಾಗೂ 1 ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಂಚಿನ ಸಿದ್ದಾಪುರ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೀಣಾ ಜ.13ರಂದು ತನ್ನ ತವರು ಮನೆ ಹೊಳಲ್ಕೆರೆಗೆ ಹೋಗಿ ಬರುವುದಾಗಿ ಹೊರಟ್ಟಿದ್ದರು. ಆದರೆ ಊರಿನ ಬಳಿ ಬಸ್ ಹತ್ತಿಕೊಂಡು ಅಲ್ಲಿಂದ ಎರಡು ಕಿ.ಮೀ ಮುಂದಿನ ಭದ್ರಾ ಕಾಲುವೆ ಬಳಿ ಇಳಿದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೀಣಾ ಸಾಯುವ ಮುನ್ನ ಡೆತ್‌ನೋಟ್ ಬರೆದಿದ್ದಾರೆ. ನಾಲೆಯ ದಡದ ಮೇಲೆಯೇ ಅವರ ಬ್ಯಾಗ್ ಪತ್ತೆಯಾಗಿದೆ. ವೀಣಾ ಮೃತದೇಹ ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ ಬಳಿ, ಮೊದಲ ಮಗಳ ಮೃತದೇಹ ಚನ್ನಗಿರಿ ತಾಲ್ಲೂಕಿನ ನಲ್ಲೂರು ಬಳಿ ಪತ್ತೆಯಾಗಿದೆ. ಇನ್ನೊಬ್ಬಳ ಮೃತದೇಹ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಮೃತ ವೀಣಾ ಪತಿ ಸಂತೋಷ್ ನೀಡಿದ ದೂರಿನ ಮೇರೆಗೆ ಅರಹತೋಳಲು ಗ್ರಾಮದ ಸಂತೋಷ್ ನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಆಶಾ ಪರಾರಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.