
ಮಂಗಳೂರು: ಮಲಗಿದ್ದ ಕೋಣೆಯಲ್ಲಿಯೇ ವಿವಾಹಿತ ಮಹಿಳೆ ಆತ್ಮಹತ್ಯೆ; ಬೆಳಗ್ಗೆದ್ದು ನೋಡಿದಾಗ ಪತಿಗೆ ಶಾಕ್!
Saturday, January 22, 2022
ಮಂಗಳೂರು: ರಾತ್ರಿ ಮಲಗಿದ್ದ ವಿವಾಹಿತ ಮಹಿಳೆಯೋರ್ವರು ಮಲಗಿದ ಕೋಣೆಯ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕುದ್ರೋಳಿಯಲ್ಲಿ ನಡೆದಿದೆ. ಅಲ್ಲಿಯೇ ಮಲಗಿದ್ದ ಪತಿಗೆ ಬೆಳಗೆದ್ದು ನೋಡಿದಾಗಲೇ ವಿಚಾರ ತಿಳಿದಿದ್ದು, ಈ ಬಗ್ಗೆ ನ್ಯಾಯ ಕೊಡಿಸಬೇಕೆಂದು ಪತಿಯೀಗ ಠಾಣೆಯ ಮೆಟ್ಟಿಲೇರಿದ್ದಾನೆ.
ನಗರದ ಕುದ್ರೋಳಿಯಲ್ಲಿನ ಬಾಡಿಗೆ ಮನೆ ನಿವಾಸಿ ಸೂಫಿಯಾ ಬೇಗಂ ಮೃತಪಟ್ಟಾಕೆ. ಸೂಫಿಯಾ ಬೇಗಂ ಹಾಗೂ ಆಕೆಯ ಪತಿ ಕುದ್ರೋಳಿಯ ಬಾಡಿಗೆ ಮನೆಯಲ್ಲಿ ಕಳೆದ 5 ತಿಂಗಳಿನಿಂದ ವಾಸಿಸುತ್ತಿದ್ದರು. ಪತಿ ಪತ್ನಿ ಎಂದಿನಂತೆ ಜ.20ರಂದು ಊಟ ಮಾಡಿ ಮಲಗಿದ್ದರು. ಮುಂಜಾನೆ 4ಗಂಟೆ ಸುಮಾರಿಗೆ ಎದ್ದು ಇಬ್ಬರೂ ಅಡುಗೆ ಮಾಡಿ ಮತ್ತೆ ಮಲಗಿದ್ದರು. ಆದರೆ ಬೆಳಗ್ಗೆ 7.45ಕ್ಕೆ ತನಗೆ ಎಚ್ಚರವಾದಾಗ ಸೂಫಿಯಾ ಬೇಗಂ ಮಲಗುವ ಕೋಣೆಯ ಕಿಟಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದರು ಎಂದು ಸೂಫಿಯಾ ಬೇಗಂ ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಏನು ಮಾಡಿದರೂ ಸೂಫಿಯಾ ಬೇಗಂ ಸ್ಪಂದಿಸಿದಿರುವ ಕಾರಣ ಆಕೆಯ ಪತಿ ಕುತ್ತಿಗೆಗೆ ಕಟ್ಟಿದ್ದ ಶಾಲನ್ನು ಬಿಚ್ಚಿ ನೆಲದಲ್ಲಿ ಮಲಗಿಸಿದ್ದಾರೆ. ಬಳಿಕ ಸ್ನೇಹಿತರಿಗೆ ಹಾಗೂ ನೆರೆಹೊರೆಯವರಿಗೆ ತಿಳಿಸಿದ್ದಾರೆ. ಎಲ್ಲರೂ ಬಂದು ಪರಿಶೀಲನೆ ಮಾಡಿದಾಗ ಸೂಫಿಯಾ ಬೇಗಂ ರವರ ದೇಹವು ತಣ್ಣಗಾಗಿದ್ದು, ಮೃತಪಟ್ಟಂತೆ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.