
ಪ್ರೇಮಿಗಳ ನಡುವೆ ಬಿರುಕು: ಪ್ರೇಯಸಿ ಆತ್ಮಹತ್ಯೆ, ಪ್ರಿಯಕರನ ಬಂಧನ
Monday, January 24, 2022
ಬೆಂಗಳೂರು: ಪ್ರೇಮಿಗಳ ನಡುವಿನ ಮನಸ್ತಾಪದಿಂದ ಬಿರುಕುಂಟಾದ ಪರಿಣಾಮ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಿಯಕರನನ್ನು ಬಂಧಿಸಿದ್ದಾರೆ.
ಚಂದನಾ (23) ಆತ್ಮಹತ್ಯೆಗೈದಿರುವ ಯುವತಿ. ನಾಗರಾಜು ಬಂಧಿತ ಆರೋಪಿ.
ಚಂದನಾ ಹಾಗೂ ನಾಗರಾಜು ಬಾಗಲಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಇಬ್ಬರೂ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಚಂದನಾ ತನ್ನ ಪ್ರೇಮದ ವಿಚಾರವನ್ನು ಮನೆಯವರಿಗೂ ತಿಳಿಸಿದ್ದಳು.
ಆದರೆ ಇದ್ದಕ್ಕಿದ್ದಂತೆ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿ, ಪರಸ್ಪರ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಆಕೆಯ ಪಾಲಕರು ನಾಗರಾಜು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.