
ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾದ ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಪತಿಯ ಮನೆಯವರ ಮೇಲೆ ಕೊಲೆ ಆರೋಪ
Wednesday, January 5, 2022
ಆನೇಕಲ್: ಆರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ಯುವತಿಯ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತಿ ಹಾಗೂ ಆತನ ಮನೆಯವರು ಕೊಲೆಗೈದಿದ್ದಾರೆಂದು ಯುವತಿಯ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ರಾಜಾಪುರ ನಿವಾಸಿ ಯಶವಂತ್ ಹಾಗೂ ಟೀಚರ್ಸ್ ಕಾಲನಿ ನಿವಾಸಿ ರಾಣಿ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ಗೌರ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯಶವಂತ್ ಆರು ತಿಂಗಳ ಹಿಂದೆ ರಾಣಿಯನ್ನು ಎರಡನೇ ವಿವಾಹವಾಗಿದ್ದ. ಆದರೆ, ರಾಣಿಯ ವೈವಾಹಿಕ ಜೀವನದ ಸಂತೋಷವು ಕೆಲವೇ ದಿನಗಳಿಗೆ ಕಮರಿ ಹೋಗಿತ್ತು. ರಾಣಿಗೆ ಯಶವಂತ್ ಕುಟುಂಬಸ್ಥರು ಚಿತ್ರಹಿಂಸೆ ನೀಡಲು ಆರಂಭಿಸಿದ್ದರು.
ಈ ಬಗ್ಗೆ ಆಕೆ ತಮ್ಮ ಪಾಲಕರ ಬಳಿಯು ಹೇಳಿಕೊಂಡು ಅಳಲು ತೋಡಿಕೊಂಡಿದ್ದಳು. ಆದರೆ, ಮನೆಯವರು ಆಕೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಕಾರಣ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಮನೆಯ ಮಹಡಿಯಲ್ಲಿ ನೇಣು ಬಿಗಿಕೊಂಡ ಸ್ಥಿತಿಯಲ್ಲಿ ಮೃತದೇಹವಿದ್ದರೂ ಆಕೆಯ ಪತಿ ಹಾಗೂ ಮನೆಯವರು ನೋಡಲು ಕೂಡ ಬಂದಿಲ್ಲ.
ಪತಿಯ ಮನೆಯವರೇ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಯುವತಿಯ ಪಾಲಕರು ಆರೋಪಿಸಿದ್ದಾರೆ. ಘಟನೆ ನಡೆದ ತಕ್ಷಣ ಜಿಗಣಿ ಪೊಲೀಸರು ಆ್ಯಂಬುಲೆನ್ಸ್ ಅನ್ನು ಸ್ಥಳಕ್ಕೆ ಕಳುಹಿಸದೆ ಬೇಜವಾಬ್ದಾರಿ ತೋರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಒತ್ತಾಯಿಸಿದ್ದಾರೆ.