
ಕದ್ದ ಲಾಟರಿಗೆ ಒಲಿಯಿತು ಬಹುಮಾನ: ನಗದು ಪಡೆಯಲೆಂದು ಹೋದ ಖದೀಮನಿಗೆ ಕಾದಿತ್ತು ಶಾಕ್
Saturday, January 22, 2022
ಕೊತ್ತಮಂಗಲಂ: ಖದೀಮನೋರ್ವನು ಕದ್ದಿರುವ ಲಾಟರಿ ಟಿಕೆಟ್ಗೆ ಒಲಿದಿತ್ತು ನಗದು ಬಹುಮಾನ. ಭಾರೀ ಸಂತೋಷದಿಂದ ಬಹುಮಾನದ ನಗದು ಪಡೆಯಲು ಹೋದಾತ ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿರುವ ಘಟನೆ ಕೇರಳದ ಕೊತ್ತಮಂಗಲಂನಲ್ಲಿ ನಡೆದಿದೆ.
ಉರುಂಬಿಲ್ ಬಾಬು ಬಂಧಿತ ಆರೋಪಿ. ಈತ ಕೊತ್ತಮಂಗಲಂನ ಜೆ.ಜೆ.ಲಾಟರೀಸ್ ಎಂಬ ಅಂಗಡಿಯಿಂದ ನವೆಂಬರ್ 12ರಂದು 80 ಸಾವಿರ ರೂ. ಮೌಲ್ಯದ 2,520 ಲಾಟರಿಗಳನ್ನು ಕಳವುಗೈದ್ದಿದ್ದ. ಆ ಬಳಿಕ ಲಾಟರಿ ಏಜೆನ್ಸಿಗಳ ಸಹಾಯದಿಂದ ಕದ್ದಿರುವ ಲಾಟರಿ ಟಿಕೆಟ್‌ಗಳ ಸಂಖ್ಯೆಯನ್ನು ಎಲ್ಲಾ ಕಡೆಗೂ ನೀಡಲಾಗಿತ್ತು.
ಕದ್ದಿರುವ ಲಾಟರಿಗೆ 5 ಸಾವಿರ ರೂ. ನಗದು ಬಹುಮಾನ ಒಲಿದಿತ್ತು. ಅದನ್ನು ತಿಳಿದ ಉರುಂಬಿಲ್ ಬಾಬು ಹಣ ಪಡೆದುಕೊಳ್ಳಲೆಂದು ಪಲಾ ಎಂಬಲ್ಲಿನ ಲಾಟರಿ ಏಜೆನ್ಸಿ ಅಂಗಡಿಗೆ ಹೋಗಿದ್ದ. ಬಾಬು ಲಾಟರಿಯನ್ನು ನೀಡಿದಾಗ ಅನುಮಾನಗೊಂಡ ಲಾಟರಿ ಅಂಗಡಿ ಮಾಲಕ ನಂಬರ್ ಅನ್ನು ಸರಿಯಾಗಿ ಪರಿಶೀಲನೆ ನಡೆಸಿದ್ದಾನೆ. ಇದರಿಂದ ಬಾಬುವಿಗೆ ಮಾಲಕನಿಗೆ ತನ್ನ ಕೃತ್ಯ ತಿಳಿದಿದೆ ಎಂದು ಅರಿತು ಲಾಟರಿ ಟಿಕೆಟ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಇದಾದ ಬಳಿಕ ಶಾಪ್ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹುಡುಕಾಟ ನಡೆಸಿ ಆರೋಪಿ ಬಾಬುವನ್ನು ಸೆರೆ ಹಿಡಿದಿದ್ದಾರೆ. ಆತನ ಮೇಲೆ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಸದ್ಯ ಕಂಜಿರಪಲ್ಲಿ ಪೊಲೀಸರು ಬಾಬುನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ