
ಅವಳಿ - ಜವಳಿ ಮಕ್ಕಳಾದರೂ ಜನನದಲ್ಲಿ ಒಂದು ವರ್ಷದ ಅಂತರ: ಅಪರೂಪದ ವಿದ್ಯಮಾನ!
Tuesday, January 4, 2022
ನವದೆಹಲಿ: ಅವಳಿ - ಜವಳಿ ಮಕ್ಕಳೆಂದರೆ ಸಾಮಾನ್ಯ ಆ ಶಿಶುಗಳ ಜನ್ಮದಿನಾಂಕ ಒಂದೇ ಆಗಿರುತ್ತದೆ. ಆದರೆ ಇಲ್ಲೊಂದು ಅಚ್ಚರಿಯೆನಿಸುವಂಥಹ ವಿದ್ಯಮಾನ ಸಂಭವಿಸಿದೆ. ಇಲ್ಲೊಬ್ಬಳು ತಾಯಿ ಜನ್ಮನೀಡಿದ್ದು ಅವಳಿ - ಜವಳಿ ಶಿಶುಗಳಿಗಾದರೂ, ಈ ಎರಡೂ ಮಕ್ಕಳ ಜನ್ಮದಿನಾಂಕದಲ್ಲಿ ಒಂದು ವರ್ಷದ ವ್ಯತ್ಯಾಸ ಉಂಟಾಗಿದೆ.
ಹೌದು.. ಕ್ಯಾಲಿಫೋರ್ನಿಯಾದ ನೇಟಿವಿಡಾಡ್ ಮೆಡಿಕಲ್ ಸೆಂಟರ್ನ ಆಸ್ಪತ್ರೆಯಲ್ಲಿ ಇಂಥದ್ದೊಂದು ವಿದ್ಯಮಾನ ಜರುಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ ಇಂತಹ ಶಿಶುಗೈ ಜನನ ಸಾಮಾನ್ಯವಾಗಿ 20 ಲಕ್ಷ ಹೆರಿಗೆಗಳಿಗೊಮ್ಮೆ ಆಗುವ ಸಾಧ್ಯತೆ ಇರುತ್ತದೆ. ಅಂಥಹ ವಿಶೇಷವಾದೊಂದು ಹೆರಿಗೆ ಈ ಬಾರಿ ನಮ್ಮ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಅಲ್ಲಿನ ವೈದ್ಯರು ಹೇಳಿಕೊಂಡಿದ್ದಾರೆ.
ಫಾತಿಮಾ ಮ್ಯಾಡ್ರಿಗಲ್ ಎಂಬ ತಾಯಿಯೇ ಇಂಥಹ ವಿರಳಾತಿ ವಿರಳ ಮಕ್ಕಳಿಗೆ ಜನ್ಮ ನೀಡಿರುವಾಕೆ. ಈಕೆಯ ಅವಳಿ - ಜವಳಿ ಮಕ್ಕಳ ಪೈಕಿ ಮೊದಲಿಗೆ ಗಂಡು ಮಗುವಿನ ಜನನವಾಗಿದೆ. ಆ ಬಳಿಕ ಹೆಣ್ಣು ಮಗು ಹುಟ್ಟಿದೆ. ಗಂಡು ಮಗು 2020ರ ಡಿಸೆಂಬರ್ 31ರ ರಾತ್ರಿ 11.45ಕ್ಕೆ ಜನಿಸಿದೆ. ಅದೇ ರೀತಿ 15 ನಿಮಿಷಗಳ ಬಳಿಕ ಹೆಣ್ಣು ಮಗು ಜನಿಸಿದೆ. ಹೀಗಾಗಿ ಇವರಿಬ್ಬರ ಜನನದಲ್ಲಿ 15 ನಿಮಿಷಗಳ ಅಂತರ ಕಂಡು ಬಂದಿದೆ. ಆದ್ದರಿಂದ ಅವಳಿ - ಜವಳಿಗಳಾದರೂ ಇವರಿಬ್ಬರ ಜನ್ಮದಿನಾಂಕದಲ್ಲಿ ಒಂದು ವರ್ಷದ ವ್ಯತ್ಯಾಸ ಉಂಟಾದಂತಾಗಿದೆ.
ಫಾತಿಮಾ ಮ್ಯಾಡ್ರಿಗಲ್ ಹಾಗೂ ರಾಬರ್ಟ್ ಟ್ರುಜಿಲೊ ದಂಪತಿಗೆ ಈ ಅವಳಿ - ಜವಳಿ ಮಕ್ಕಳ ಹೊರತಾಗಿ ಇನ್ನಿಬ್ಬರು ಪುತ್ರಿಯರು ಹಾಗೂ ಓರ್ವ ಗಂಡು ಮಗುವನ್ನು ಹೊಂದಿದ್ದಾರೆ.