
ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ ಆರೋಪ: ನ್ಯಾಯಕ್ಕಾಗಿ ವೀಡಿಯೋ ಹರಿಯಬಿಟ್ಚ ಯುವಕ
Wednesday, January 19, 2022
ಸುಳ್ಯ: ಸುಳ್ಳು ಪ್ರಕರಣಕ್ಕೆ ಸಂಬಂಧಿಸಿ, ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿ ಪೊಲೀಸ್ ಠಾಣೆಗೆ ಕರೆಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆಂದು ಯುವಕನೊಬ್ಬ ಆರೋಪಿಸಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸುಳ್ಯ ತಾಲೂಕಿನ ಪಾಲ್ತಾಡಿ ಸಮೀಪದ ಮಣಿಕ್ಕರ ಕೊಡ್ಯಕ್ಕ ನಿವಾಸಿ ಅಜಿತ್ ಎಸ್. ಈ ರೀತಿಯಲ್ಲಿ ಆರೋಪಿಸಿ ವೀಡಿಯೋ ಮಾಡಿರುವ ಯುವಕ. ಪೊಲೀಸರು ತನ್ನನ್ನು ಠಾಣೆಗೆ ಕರೆಸಿಕೊಂಡು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಟಿವಿ ರಿಪೇರಿ ವೃತ್ತಿ ನಿರ್ವಹಿಸುತ್ತಿರುವ ಅಜಿತ್ ಎಸ್., ಬೆಳ್ಳಾರೆ ಪೊಲೀಸ್ ಠಾಣೆಯ ಸಿಬ್ಬಂದಿ ಬಾಲು ಹಾಗೂ ಇನ್ನೋರ್ವ ಪೊಲೀಸ್ ಸಿಬ್ಬಂದಿ ತನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. ಠಾಣೆಯಲ್ಲಿ ಆ ದಿನದ ಸಿಸಿ ಕ್ಯಾಮರಾ ಪರಿಶೀಲಿಸಿದರೆ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಯಬಹುದು ಎಂದು ಅಜಿತ್ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಜಿತ್ ಮುಖ ಊದಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ತಕ್ಷಣವೇ ತನಿಖೆ ನಡೆಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.