
'ವಿಶ್ವದ ನಂ. 1 ಸೆನ್ಸಿಟಿವಿಟಿ ಟೂಥ್ ಪೇಸ್ಟ್' ಎನ್ನುತ್ತಿದ್ದ ಸೆನ್ಸೊಡೈನ್ ಪೇಸ್ಟ್ ಜಾಹಿರಾತು ಭಾರತದಲ್ಲಿ ಬ್ಯಾನ್: 10 ಲಕ್ಷ ರೂ. ದಂಡ
Monday, February 14, 2022
ನವದೆಹಲಿ: ಇಂಗ್ಲೆಂಡ್ ಮೂಲದ ಸೆನ್ಸೋಡೈನ್ ಟೂಥ್‌ಪೇಸ್ಟ್ ಜಾಹೀರಾತು ಭಾರತದಲ್ಲಿ ಎಲ್ಲಿಯೂ ಕಾಣಿಸಕೂಡದೆಂದು ಗ್ರಾಹಕರ ಕೋರ್ಟ್ ಆದೇಶವೊಂದನ್ನು ಹೊರಡಿಸಿದೆ. ಈ ಟೂಥ್‌ಪೇಸ್ಟ್ ತಯಾರಿಕಾ ಸಂಸ್ಥೆ ಗ್ಲ್ಯಾಕ್ಸೋ ಸ್ಮಿತ್‌ಕ್ಲೈನ್ ಕನ್ಸ್ಯೂಮರ್ ಹೆಲ್ತ್‌ಕೇರ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿರುವ ಗ್ರಾಹಕ ರಕ್ಷಣಾ ನಿಯಂತ್ರಕ (ಸಿಸಿಪಿಎ) ಇಂಥದ್ದೊಂದು ಆದೇಶವನ್ನು ಜಾರಿಗೊಳಿಸಿದೆ.
ಟಿವಿಗಳಲ್ಲಿ ಸೇರಿದಂತೆ ಎಲ್ಲಿಯೂ ಸೆನ್ಸೋಡೈನ್ ಟೂಥ್‌ಪೇಸ್ಟ್ ಜಾಹೀರಾತು ತೋರಿಸಬಾರದು ಎಂದು ನಿರ್ಬಂಧವನ್ನು ವಿಧಿಸಲಾಗಿದೆ. ಇದಕ್ಕೆ ಕಾರಣವೇನೆಂದರೆ, ಟಿವಿಯಲ್ಲಿ ಬರುವ ಈ ಜಾಹೀರಾತಿನಲ್ಲಿ ವೈದ್ಯರು ಈ ಉತ್ಪನ್ನವನ್ನು ಅನುಮೋದಿಸುವುದಾಗಿ ಹೇಳುವುದನ್ನು ಕಾಣಬಹುದು. ಆದರೆ ಭಾರತದ ಹೊರಗೆ ಅಭ್ಯಾಸ ಮಾಡುತ್ತಿರುವ ದಂತವೈದ್ಯರು ಜಾಹೀರಾತಿನಲ್ಲಿ ಉತ್ಪನ್ನಗಳನ್ನು ಅನುಮೋದಿಸುತ್ತಿದ್ದಾರೆ. ಇದು ನಿಯಮ ಬಾಹಿರ. ಜಾಹೀರಾತಿನ ನಿಯಮದ ಅನ್ವಯ ಇದು ಉಲ್ಲಂಘನೆ ಆಗಿದೆ ಎಂದು ಸಿಸಿಪಿಎ ಹೇಳಿದೆ.
ಭಾರತದಲ್ಲಿ ಜಾರಿಯಲ್ಲಿರುವ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಹಾಗೂ ಹಲ್ಲಿನ ಸೂಕ್ಷ್ಮತೆಯನ್ನು ಕುರಿತು ಗ್ರಾಹಕರಿಗೆ ಭಯ ಹುಟ್ಟಿಸುವ ನಿಟ್ಟಿನಲ್ಲಿ ವಿದೇಶಿ ದಂತವೈದ್ಯರನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ಆದರೆ ಇದನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಿಸಿಪಿಎ ತಿಳಿಸಿದ್ದು ನಿರ್ಬಂಧ ವಿಧಿಸಿದ್ದು 10 ಲಕ್ಷ ರೂ. ದಂಡ ವಿಧಿಸಿದೆ. “ವಿಶ್ವದಾದ್ಯಂತ ದಂತವೈದ್ಯರು ಶಿಫಾರಸು ಮಾಡುತ್ತಿರುವ, ವಿಶ್ವದ ನಂ.1 ಸೆನ್ಸಿಟಿವಿಟಿ ಟೂಥ್‌ಪೇಸ್ಟ್ ಇದಾಗಿದೆ. ಮಾತ್ರವಲ್ಲದೇ 60 ಸೆಕೆಂಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದು ಜಾಹೀರಾತಿನಲ್ಲಿ ತೋರಿಸಲಾಗುತ್ತಿತ್ತು. ಇದು ದಾರಿ ತಪ್ಪಿಸುವ ಜಾಹೀರಾತು ಆಗಿರುವುದಾಗಿ ಸಿಸಿಪಿಎ ಅಭಿಪ್ರಾಯ ಪಟ್ಟಿದೆ.