-->
ಲೋನ್ ಆ್ಯಪ್ ಗಳ ಕಾಟಕ್ಕೆ ನಲುಗಿದ ವ್ಯಕ್ತಿ: 10 ಸಾವಿರ ರೂ. ಸಾಲ ಪಡೆದಿರುವುದಕ್ಕೆ 7 ಲಕ್ಷ ರೂ. ಪಾವತಿ

ಲೋನ್ ಆ್ಯಪ್ ಗಳ ಕಾಟಕ್ಕೆ ನಲುಗಿದ ವ್ಯಕ್ತಿ: 10 ಸಾವಿರ ರೂ. ಸಾಲ ಪಡೆದಿರುವುದಕ್ಕೆ 7 ಲಕ್ಷ ರೂ. ಪಾವತಿ

ಚಿಕ್ಕಬಳ್ಳಾಪುರ: ತುರ್ತು ಅಗತ್ಯವೆಂದು ಆ್ಯಪ್​ಗಳ ಮೂಲಕ ಸಾಲ ಪಡೆಯುವ ಮುನ್ನ ಎಚ್ಚರಿಕೆ ಇರಲಿ. ಇಲ್ಲೊಬ್ಬ 10 ಸಾವಿರ ರೂ. ಸಾಲಕ್ಕೆ ತೆಗೆದುಕೊಂಡಿರೋದಕ್ಕೆ ಬರೋಬ್ಬರಿ 7 ಲಕ್ಷ ರೂ. ಪಾವತಿಸಿದ್ದಾನೆ. ಅಷ್ಟೇ ಅಲ್ಲ, ನಿರಂತರ ಕಿರುಕುಳ ಹಾಗೂ ಬೆದರಿಕೆಗೆ ಸಿಲುಕಿ ನಲುಗಿದ್ದಾರೆ. 

ಚಿಂತಾಮಣಿ ತಾಲೂಕಿನ ಜಿಯೋ ಭೋರ್​ ಕಂಪೆನಿಯ ವ್ಯವಸ್ಥಾಪಕ ಬುರಡಗುಂಟೆಯ ವಿನೋದ್​ (33) ವಂಚನೆಗೊಳಗಾದ ಸಂತ್ರಸ್ತ ವ್ಯಕ್ತಿ. ಇದೀಗ ಇವರು ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. 2021ರ ಡಿ.27ರಂದು ವಿನೋದ್​ ಸ್ನೇಹಿತರೋರ್ವರಿಗೆ ಅಪಘಾತವಾಗಿತ್ತು. ತುರ್ತು ಅವಶ್ಯಕತೆಗೆಂದು ವಿನೋದ್​, ಗೂಗಲ್​ನಲ್ಲಿ ಸಾಲ ನೀಡುವ ಆ್ಯಪ್​ ಡೌನ್​ಲೌಡ್​ ಮಾಡಿಕೊಂಡು ಬ್ಯಾಂಕ್​ ಖಾತೆ ಲಿಂಕ್​ ಮಾಡಿ, ಎರಡು ಹಂತದಲ್ಲಿ ತಲಾ 5 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ಬಡ್ಡಿ ಹೋಗಿ ಕೇವಲ 5,962 ರೂ. ಬ್ಯಾಂಕ್ ಖಾತೆಗೆ ಜಮಾ ಆಗಿತ್ತು. 

ಈ ಸಾಲ ತೀರಿಸಲೆಂದು ಮತ್ತೊಂದು ಆ್ಯಪ್​ನಲ್ಲಿ 4,180 ರೂ. ಮತ್ತು 3,400 ರೂ. ಸಾಲ ಪಡೆದುಕೊಂಡಿದ್ದರು. ಕೊನೆಗೆ ಸಾಲ ಮತ್ತು ಬಡ್ಡಿ ಸೇರಿ 20 ಸಾವಿರ ರೂ. ಪಾವತಿಸಿ, ವ್ಯವಹಾರ ಮುಗಿಸಿದ್ದಾರೆ. ಆದರೆ ಸಾಲ ಕಟ್ಟಲು ತಡ ಮಾಡಿರೋದ್ದಕ್ಕೆ ದಿನಕ್ಕೆ 10 ಸಾವಿರ ರೂ.ನಂತೆ ಬಡ್ಡಿ ಕಟ್ಟುವಂತೆ ವಿನೋದ್​ಗೆ ಹೇಳಿದ್ದಾರೆ. ಅನಿವಾರ್ಯವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಿಂದ 2,42,029 ರೂ. ಮತ್ತು ಯೂನಿಯನ್​ ಬ್ಯಾಂಕ್​ನಿಂದ 4,58,160 ರೂ. ಸೇರಿ 7,00,189 ಕಟ್ಟಿದ್ದಾರೆ. ಆದರೂ ಬಿಡದೆ ಮತ್ತೊಮ್ಮೆ 1,50,000 ರೂ. ಪಾವತಿಗೆ ಒತ್ತಡ ಹೇರಿದ್ದಾರೆ. ಹಣ ಕಟ್ಟದಿದ್ದಲ್ಲಿ ತಮ್ಮ ಮಗಳ ಫೋಟೋವನ್ನು ಬೇರೆಯವರಿಗೆ ಪೋಸ್ಟ್​ ಮಾಡುವುದಾಗಿ ವಿನೋದ್​ಗೆ ಬೆದರಿಸಿದ್ದಾರೆ. 

ಇದೀಗ ಆ್ಯಪ್ ನವರ ಕಾಟಕ್ಕೆ ನಲುಗಿರುವ ವಿನೋದ್​ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಹಣ ಪಾವತಿ ಮಾಡದ ಕಾರಣ ಮಗಳ ಫೋಟೋ ​ ಅನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸುವ ಬೆದರಿಕೆಯೊಡ್ಡಲಾಗುತ್ತಿದೆ ಎಂದು ದೂರುದಾರ ವಿನೋದ್​ ಆರೋಪಿಸಿದ್ದಾರೆ. ನಿರಂತರವಾಗಿ ಮೊಬೈಲ್​ ಕರೆ ಮಾಡಿ, ಹೆಚ್ಚಿನ ಹಣ ಪಾವತಿಗೆ ಒತ್ತಡ ಹೇರಲಾಗುತ್ತಿದೆ. ಬ್ಯಾಂಕಿನ ಲಿಂಕ್​ಗಳನ್ನು ಕಳುಹಿಸಿ ಹಣ ಲಪಟಾಯಿಸುತ್ತಾರೆ ಇಲ್ಲವೇ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಲಾಗುತ್ತಿದೆ ಎಂದು ವಿನೋದ್,​ ಜಿಲ್ಲಾ ಅಪರಾಧ ದಳಕ್ಕೆ ದೂರು ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article