
ಇಂಡೋನೇಷ್ಯಾ: 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗೈದು 8 ಮಂದಿಯನ್ನು ಗರ್ಭಿಣಿ ಮಾಡಿದ ಕಾಮುಕ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Wednesday, February 16, 2022
ಇಂಡೋನೇಷ್ಯಾ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕರೇ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವಿಚಾರಗಳು ಸಾಕಷ್ಟು ಕಡೆಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಅದೇ ರೀತಿ ಶಿಕ್ಷಕನೊಬ್ಬ ತಾನು ಕಲಿಸುತ್ತಿರುವ 13 ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಎಂಟು ಮಂದಿಯನ್ನು ಗರ್ಭಿಣಿ ಮಾಡಿರುವ ಭಯಾನಕ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. ಇದೀಗ ಈ ಕಾಮುಕ ಶಿಕ್ಷಕನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಂಥದ್ದೊಂದು ಕೃತ್ಯ ಎಸಗಿರುವ ಬೋರ್ಡಿಂಗ್ ಶಾಲೆಯಲ್ಲಿರುವ 36 ವರ್ಷದ ಶಿಕ್ಷಕ ಹೆರ್ರಿ ವೈರಿಯಾವಾನ್ ಜೀವಾವಧಿ ಶಿಕ್ಷೆಗೆ ಒಳಗಾದವನು. ಈ ವಿದ್ಯಾರ್ಥಿಗಳ ಪಾಲಕರು ಬೋರ್ಡಿಂಗ್ ಶಾಲೆಯಲ್ಲಿ ಅವರನ್ನು ಕಲಿಯಲು ಬಿಟ್ಟು ಹೋಗಿದ್ದಾರೆ. ಆದರೆ ಈ ಕಾಮುಕ ಶಿಕ್ಷಕ 13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈ ಪೈಕಿ 8 ಮಂದಿ ವಿದ್ಯಾರ್ಥಿನಿಯರು ಗರ್ಭಿಣಿಯಾಗಿದ್ದಾರೆ. 2016 ಹಾಗೂ 2021ರ ನಡುವೆ ಬೋರ್ಡಿಂಗ್ ಶಾಲೆಗಳಲ್ಲಿ ತನ್ನ ಆರೈಕೆಯಲ್ಲಿ 13 ಮತ್ತು 16 ವಯಸ್ಸಿನ 13 ವಿದ್ಯಾರ್ಥಿನಿಯರ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ. ಆದರೆ ಇದುವರೆಗೆ ಯಾವ ವಿದ್ಯಾರ್ಥಿನಿಯೂ ಸಮಾಜಕ್ಕೆ ಅಂಜಿ ಬಾಯಿ ಬಿಟ್ಟಿರಲಿಲ್ಲ. ತಮ್ಮ ಮಕ್ಕಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದರೂ ಪಾಲಕರು ಬಹಿರಂಗಗೊಳಿಸರಲಿಲ್ಲ.
ಓರ್ವ ಬಾಲಕಿಯ ಪಾಲಕರು ದೂರು ದಾಖಲಿಸಿದ್ದಾಗ ವಿಚಾರ ಬೆಳಕಿಗೆ ಬಂದಿದೆ. ಇದೀಗ ವಿಚಾರಣೆ ನಡೆದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಈತನಿಗೆ ಮರಣದಂಡನೆ ವಿಧಿಸಬೇಕೆಂದು ಪಾಲಕರು ಪಟ್ಟುಹಿಡಿದು ಪ್ರತಿಭಟನೆ ಆರಂಭಿಸಿದ್ದಾರೆ.