ಪಿಂಪಲಗಾಂವ್: ಕೇವಲ 14 ರೂಪಾಯಿಯಲ್ಲೇ 100 ಕಿ.ಮೀ. ಪ್ರಯಾಣಿಸುವ ಇ-ಬೈಕ್ ಅಭಿವೃದ್ಧಿಪಡಿಸಿದ ರೈತ
Friday, February 18, 2022
ನಾಂದೇಡ್: ಕೆಲ ಗ್ರಾಮೀಣ ಜನರಲ್ಲಿ ಏನೇನೋ ಪ್ರತಿಭೆಗಳು ಅಡಗಿರುತ್ತವೆ. ಈ ಜನರು ನಿತ್ಯವೂ ಏನಾದರೊಂದು ಹೊಸಹೊಸ ಪ್ರಯತ್ನಗಳನ್ನು ಸಾಧಿಸುತ್ತಲೇ ಇರುತ್ತಾರೆ. ಇಲ್ಲೊಬ್ಬ ಹೂವಿನ ಬೆಳೆಗಾರರೊಬ್ಬರು ದಿನನಿತ್ಯದ ಪೆಟ್ರೋಲ್ ವೆಚ್ಚ ಭರಿಸಲಾಗದೆ ವಿಶಿಷ್ಟ ಉಪಾಯವೊಂದನ್ನು ಮಾಡಿದ್ದಾರೆ. ಆತ ತಮ್ಮ ಹಳೆಯ ಮೋಟಾರ್ ಸೈಕಲ್‌ಗಳನ್ನು ಇಲೆಕ್ಟ್ರಿಕ್ ಬೈಕಾಗಿ ಪರಿವರ್ತಿಸಿದ್ದಾರೆ. ಇದೀಗ ಅವರ ಎರಡು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಈ ಇಲೆಕ್ಟ್ರಿಕ್ ಬೈಕ್ ಕೇವಲ 14 ರೂ. ವೆಚ್ಚದಲ್ಲಿ 100 ಕಿ.ಮೀ. ದೂರವನ್ನು ಪ್ರಯಾಣಿಸಿದೆ.
ಅರ್ಧಾಪುರ ತಾಲೂಕಿನ ಪಿಂಪಲಗಾಂವ್ ಮಹಾದೇವ ಎಂಬಲ್ಲಿನ ನಿವಾಸಿ 30 ವರ್ಷದ ಈ ಜುಗಾಡು ರೈತನೇ ಜ್ಞಾನೇಶ್ವರ್ ಉಮಾಜಿರಾವ್ ಕಲ್ಯಾಣ್ಕರ್ ಈ ರೀತಿಯ ಆವಿಷ್ಕಾರ ಮಾಡಿರುವ ರೈತ. ಏರುತ್ತಿರುವ ತೈಲ ಬೆಲೆ ಹಾಗೂ ಹೆಚ್ಚುತ್ತಿರುವ ಮಾಲಿನ್ಯವು ಅವರನ್ನು ಇಲೆಕ್ಟ್ರಿಕ್ ಬೈಕ್ ನ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆಯಂತೆ.
ತೋಟದ ಕೆಲಸಗಳಿಗೆ, ಹೂವಿನ ಮಾರುಕಟ್ಟೆಗಳಿಗೆ ಹೋಗಲು ಹಾಗೂ ಊರಿನ ಸುತ್ತಮುತ್ತ ಓಡಾಡಲು ಪರಿಸರ ಸ್ನೇಹಿ ಚಾರ್ಜಿಂಗ್ ಬೈಕ್ ಅನ್ನು ಜ್ಞಾನೇಶ್ವರ್ ತಯಾರಿಸಿದ್ದಾರೆ.
ಈ ಇಲೆಕ್ಟ್ರಿಕ್ ಬೈಕ್ 300 ಕೆಜಿ ಭಾರವನ್ನು ಹೊರಬಲ್ಲದು ಎನ್ನಲಾಗಿದೆ. ಪಿಂಪಲಗಾಂವ್ ಶಿವರಾದಲ್ಲಿ ಜ್ಞಾನೇಶ್ವರ್ ಹಾಗೂ ಸಹೋದರರು ಸಾಂಪ್ರದಾಯಿಕ ಕೃಷಿಗೆ ಬದಲಾಗಿ ವಿವಿಧ ರೀತಿಯ ಹೂವುಗಳನ್ನು ಬೆಳೆಸುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಅನಿರೀಕ್ಷಿತ ಲಾಕ್‌ಡೌನ್, ಕುಗ್ಗುತ್ತಿರುವ ವಿವಾಹ ಸಮಾರಂಭ ಮತ್ತು ಇತರ ಘಟನೆಗಳು ಅವರ ಆದಾಯಕ್ಕೆ ಕೊಡಲಿ ಪೆಟ್ಟು ಕೊಡುವಂತೆ ಮಾಡಿದೆ.
ತಮ್ಮ ಪ್ರಯಾಣಕ್ಕಾಗಿ ಜ್ಞಾನೇಶ್ವರ್ ದಿನಕ್ಕೆ 250 ರೂ.ಗಳನ್ನು ಖರ್ಚು ಮಾಡಬೇಕಾಗಿತ್ತು. ಹೀಗಾಗಿ, ಪ್ರಯಾಣದ ವೆಚ್ಚ ಭರಿಸಲಾಗದ ಕಾರಣ ಈ ಯುವ ರೈತ ಚಾರ್ಜಿಂಗ್ ಮೋಟರ್ ಸೈಕಲ್ ಅನ್ನು ಅಭಿವೃದ್ಧಿಪಡಿಸುವ ಪ್ರಯೋಗವನ್ನು ಮಾಡಲು ನಿರ್ಧರಿಸಿದ್ದರು. ಇದೀಗ ಅವರು ಇಲೆಕ್ಟ್ರಿಕ್ ಮೋಟಾರ್ ಸೈಕಲ್ ಅಭಿವೃದ್ಧಿಪಡಿಸುವ ತಮ್ಮ ಕನಸನ್ನು ನನಸಾಗಿಸಿದ್ದಾರೆ.
ಹತ್ತನೇ ತರಗತಿಯವರೆಗೆ ಶಾಲಾ ಶಿಕ್ಷಣ ಮುಗಿಸಿರುವ ರೈತ ಜ್ಞಾನೇಶ್ವರ್ ವಿದ್ಯುತ್ ಚಾರ್ಜಿಂಗ್‌ನಲ್ಲಿ ಚಲಿಸುವ ಮಾಲಿನ್ಯ ಮುಕ್ತ ಮೋಟಾರ್‌ಸೈಕಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಕೇವಲ 14 ರೂ. ವೆಚ್ಚದಲ್ಲಿ ನಾಲ್ಕು ಗಂಟೆಗಳ ಕಾಲ ಚಾರ್ಜ್ ಮಾಡಿದರೆ 100 ಕಿ.ಮೀ. ಪ್ರಯಾಣಿಸಬಹುದು.
ಈ ಮೋಟಾರ್ ಸೈಕಲ್ ನಿರ್ಮಿಸಲು 26,000 ರಿಂದ 40,000 ರೂ. ವೆಚ್ಚ ತಗುಲಿದೆ. ಇವರ ವಿನೂತನ ಬೈಕ್ ನೋಡಲು ಗ್ರಾಮದ ನಾಗರಿಕರು ಮುಗಿ ಬೀಳುತ್ತಿದ್ದಾರೆ