
ಉಳ್ಳಾಲ : 1.60 ಕ್ವಿಂಟಾಲ್ ಅಕ್ರಮ ಗೋಮಾಂಸ ಸಾಗಾಟ; ನಾಲ್ವರು ವಶಕ್ಕೆ
Thursday, February 3, 2022
ಮಂಗಳೂರು: ಈಕೋ ಕಾರ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.60 ಕ್ವಿಂಟಾಲ್ ಗೋಮಾಂಸವು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೊತ್ತು ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿರುವ ಹುಸೇನ್(24), ಮಹಮ್ಮದ್ ಮುಜಾಂಬಿಲ್(25), ಮಹಮ್ಮದ್ ಅಮೀನ್(21), ಸೊಹೈಬ್ ಅಕ್ತರ್(22) ಬಂಧಿತ ಆರೋಪಿಗಳು.
ಆರೋಪಿಗಳು ಕೇರಳ ರಾಜ್ಯದ ಕಾಸರಗೋಡಿನಿಂದ ಉಳ್ಳಾಲಕ್ಕೆ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದರು. ಇವರು ಕಾಸರಗೋಡಿನ ಬಂದ್ಯೋಡಿನ ಮೊಹಮ್ಮದ್ ಎಂಬವರಿಂದ ಗೋವನ್ನು ಖರೀದಿಸಿ ಅವರ ಮನೆಯಲ್ಲೇ ಅದನ್ನು ಕಡಿದು ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದರು. ಆರೋಪಿಗಳು ಈ ಗೋಮಾಂಸವನ್ನು ಯು.ಸಿ.ಇಬ್ರಾಹೀಂ ಕೋಡಿ ಎಂಬವರ ಉಳ್ಳಾಲದ ಕೋಡಿ ಹಾಗೂ ಮುಕ್ಕಚ್ಚೇರಿಯಲ್ಲಿನ ಬೀಫ್ ಸ್ಟಾಲ್ ಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದರು.
ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭ ಈಕೋ ಕಾರ್ ನಲ್ಲಿ ದನದ ಮಾಂಸ, ಮೂರು ದನದ ತಲೆಗಳ, ದನದ ಚರ್ಮ ಪತ್ತೆಯಾಗಿದೆ. ಬಂಧಿತರಿಂದ ಅಕ್ರಮ ಸಾಗಾಟದ ಗೋಮಾಂಸ ಸೇರಿ 3.1 ಲಕ್ಷ ರೂ. ಮೊತ್ತದ ಸೊತ್ತು ವಶ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.