ಪ್ರಿಯಕರನನ್ನು ಮದುವೆಯಾಗಲು 18ವರ್ಷ ತುಂಬುವವರೆಗೆ ತನ್ನನ್ನು ಬಾಲ ಮಂದಿರದಲ್ಲಿ ಇರಿಸುವಂತೆ ಮನವಿ ಮಾಡಿ ಠಾಣೆಯ ಮೆಟ್ಟಿಲೇರಿದ ಪಿಯುಸಿ ವಿದ್ಯಾರ್ಥಿನಿ
Monday, February 7, 2022
ಕೊಳ್ಳೆಗಾಲ: ತನ್ನನ್ನು ಮದುವೆಯಾಗಲು ಪ್ರಿಯಕರ ನಿರಾಕರಿಸುತ್ತಿದ್ದಾನೆ. ಆದ್ದರಿಂದ ಆತನೊಂದಿಗೆ ವಿವಾಹವಾಗಲು 18 ವರ್ಷ ತುಂಬುವವರೆಗೆ ತನ್ನನ್ನು ಬಾಲ ಮಂದಿರದಲ್ಲಿ ಇರಿಸುವಂತೆ ಮನವಿ ಮಾಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ವಿದ್ಯಾರ್ಥಿನಿ ತನ್ನ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಪ್ರೇಮ ಕಥೆಯನ್ನು ಲಿಖಿತ ರೂಪದಲ್ಲಿ ತಿಳಿಸಿ ಪ್ರಿಯಕರ, ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಮಹೇಶ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾಳೆ.
ಈ ಪಿಯುಸಿ ವಿದ್ಯಾರ್ಥಿನಿಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭ ಮಹೇಶ್ ಅಲಿಯಾಸ್ ಅಪ್ಪು ಎಂಬಾತನ ಪರಿಚಯವಾಗಿದೆ. ಆ ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಈ ವಿಚಾರ ಎರಡೂ ಮನೆಯವರಿಗೂ ತಿಳಿದಿತ್ತು. ಈ ನಡುವೆ ವಿದ್ಯಾರ್ಥಿನಿಗೆ ಪಾಲಕರು ಪ್ರೀತಿ ಬಿಟ್ಟು ಸುಮ್ಮನಿರಲು ಸೂಚಿಸಿದರೂ ಕೇಳದೆ, ಪ್ರಿಯಕರನ ಮನೆಗೆ ತೆರಳಿ ನಿನ್ನೊಂದಿಗೆ ಇರುವುದಾಗಿ ಕೇಳಿಕೊಂಡಿದ್ದಾಳೆ.
ಆದರೆ, ಪ್ರಿಯಕರನ ಪಾಲಕರು ನಿನಗೆ ಇನ್ನೂ 18 ವರ್ಷ ತುಂಬಿಲ್ಲ. ಹಾಗಾಗಿ, ನೀನು ಇಲ್ಲಿಗೆ ಬರಬಾರದು ಎಂದು ಕಳುಹಿಸಿದ್ದಾರೆ. ಪ್ರಿಯಕರನೂ 18 ವರ್ಷ ಆಗುವವವರೆಗೆ ಆಕೆಯ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿದ್ದಾನೆ. ಆ ಬಳಿಕ ಆತ ಆಕೆಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇತ್ತ ವಿದ್ಯಾರ್ಥಿನಿ ತನ್ನ ಪಾಲಕರೊಂದಿಗೆ ಇರಲು ಇಚ್ಛಿಸದೆ ಪ್ರಿಯಕರನ್ನೊಂದಿಗೆ ಮದುವೆಯಾಗಲು ನಿರ್ಧರಿಸಿ ದೂರು ನೀಡಿದ್ದಾಳೆ. ತನಗೆ 18 ವರ್ಷವಾಗದ ಹಿನ್ನೆಲೆಯಲ್ಲಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಬಾಲಮಂದಿರಲ್ಲಿ ಇರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಈ ಸಂಬಂಧ ಸಬ್ ಇನ್ಸ್ಪೆಕ್ಟರ್ ಆರ್.ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.